ಬಳ್ಳಾರಿಯ ಸಮಾಜ ಕಲ್ಯಾಣ ಇಲಾಖೆಯ ಮುಂಭಾಗದಲ್ಲಿ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ವಿವಿ ವಿದ್ಯಾರ್ಥಿಗಳು ಪ್ರತಿಭಟಿಸಿದರು. ಸಂಘಟನೆ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ಪದಾಧಿಕಾರಿಗಳಾದ ಈರಣ್ಣ, ಕಂಬಳಿ ಮಂಜುನಾಥ, ಎಂ.ಶಾಂತಿ ನಿಹಾರಿಕ, ಸಮೀರ್, ವಿದ್ಯಾರ್ಥಿಗಳಾದ ನಿಹಾರಿಕಾ.ಆರ್, ಅರುಣ್, ಭಾಗ್ಯ ಬಾಯಿ, ಮಂಜುನಾಥ, ಹನುಮೇಶ ಬನ್ನಿಕೊಪ್ಪ ಇತರರಿದ್ದರು. 
ಬಳ್ಳಾರಿ

ವಿವಿ ಹಾಸ್ಟೆಲ್‌ನಲ್ಲಿ ಕಳೆಪ ಆಹಾರ ವಿತರಣೆ

ಪ್ರಮುಖ ಮುಖ್ಯಾಂಶಗಳು

  • ಎಐಡಿಎಸ್‌ಒ ಸಂಘಟನೆಯಿಂದ ಪ್ರತಿಭಟನೆ
  • ಆಹಾರವು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ

ಬಳ್ಳಾರಿ : ಎಐಡಿಎಸ್‌ಒ ಸಂಘಟನೆ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ಬಳ್ಳಾರಿ, ವಿಜಯನಗರ ಹಾಗೂ ಸೇರಿದಂತೆ ನೆರೆಯ ಜಿಲ್ಲೆಗಳಿಂದ ಉನ್ನತ ಶಿಕ್ಷಣಕ್ಕಾಗಿ ನೂರಾರು ವಿದ್ಯಾರ್ಥಿಗಳು ವಿಎಸ್‌ಕೆ ವಿವಿಗೆ ಪ್ರವೇಶ ಪಡೆಯುತ್ತಿದ್ದಾರೆ. ಆದರೆ, ವಿವಿ ವಸತಿ ನಿಲಯಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯ ಕೂಡ ಸರಿಯಾಗಿ ದೊರೆಯುತ್ತಿಲ್ಲ ಎಂದರು.

ವಸತಿ ನಿಲಯಗಳಲ್ಲಿ 450ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಇಲ್ಲಿ ಪೂರೈಕೆಯಾಗುತ್ತಿರುವ ಆಹಾರವು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ. ಪೌಷ್ಠಿಕಾಂಶದ ಕೊರತೆಯಿರುವ ಆಹಾರ ಸೇವನೆಯಿಂದಾಗಿ ವಿದ್ಯಾರ್ಥಿಗಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಶುಚಿತ್ವ ಇಲ್ಲದಂತಾಗಿದ್ದು, ಶೌಚಾಲಯ ಮತ್ತು ಅಡುಗೆ ಕೋಣೆಗಳಲ್ಲಿ ಸ್ವಚ್ಛತೆಯ ಕೊರತೆಯಿದೆ. ಇದರೊಂದಿಗೆ ಕುಡಿವ ನೀರಿನ ಸಮಸ್ಯೆ ಹಾಗೂ ನೈರ್ಮಲ್ಯದ ಕೊರತೆಯೂ ಹೆಚ್ಚಾಗಿದೆ ಎಂದರು.
ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿ ಸಂಬಂಧಿತ ಅಧಿಕಾರಿಗಳ ಸಮನ್ವಯ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆಗೀಡಾಗುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆಸುವ ಹಾಸ್ಟೆಲ್‌ಗಳಲ್ಲಿ ಸರ್ಕಾರ ಕೊಡುವ ಹಣದಲ್ಲೇ ಗುಣಮಟ್ಟದ ಆಹಾರ ಒದಗಿಸಲಾಗುತ್ತಿದೆ, ಅದು ವಿಶ್ವವಿದ್ಯಾನಿಲಯದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಪ್ರಶ್ನಿಸಿದರು. ಸರ್ಕಾರ ಕೂಡಲೇ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಪೂರೈಸಬೇಕು ಮತ್ತು ನೈರ್ಮಲ್ಯ ಕಾಪಾಡಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.