ಬಳ್ಳಾರಿಯ ರೈಲು ನಿಲ್ದಾಣಕೇಂದ್ರದ ಹೊರನೋಟ.
- ಸ್ಥಳೀಯರಿಗಿಂತ ಅನ್ಯ ರಾಜ್ಯದವರೇ ಉನ್ನತ ಸ್ಥಾನ
- ಜಿಂದಾಲ್ ಕಂಪನಿಯೂ ಕೇಂದ್ರಕ್ಕೆ ಪ್ರಸ್ತಾವನೆ
- ಸ್ಥಳೀಯ ಉದ್ಯಮಿಗಳು ವಿರೋಧ
ಬಳ್ಳಾರಿ : ಜಿಲ್ಲಾ ಕೇಂದ್ರದಲ್ಲಿರುವ ರೈಲ್ವೆ ಗೂಡ್ಸ್ ಶೆಡ್ ಅನ್ನು ಜೆಎಸ್‌ಡಬ್ಲೂೃಅಧೀನದಲ್ಲಿರುವ ಕುಡತಿನಿ ಬಳಿಯ ರೈಲ್ವೆ ಸ್ಲೈಡಿಂಗ್‌ಗೆ ಸ್ಥಳಾಂತರಿಸುವಂತೆ ಜಿಂದಾಲ್ ಕಂಪನಿಯೂ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ.
ಕೈಗಾರಿಕೆಗಳು ಬೆಳೆದು ಸ್ಥಳೀಯ ಯುವಕರಿಗೆ ಉದ್ಯೋಗಗಳು ದೊರೆಯಲಿ ಎಂಬ ಉದ್ದೇಶದಿಂದ ಜೆಎಸ್‌ಡಬ್ಲೂೃ ಕಂಪನಿಗೆ ಕಳೆದ ಕೆಲ ವರ್ಷಗಳ ಹಿಂದಯೇ ಸಾವಿರಾರು ಎಕರೆ ಕೃಷಿ ಭೂಮಿ ನೀಡಲಾಗಿದೆ. ಆದರೆ, ಸದ್ಯ ಕಂಪನಿಯಲ್ಲಿ ಸ್ಥಳೀಯರಿಗಿಂತ ಅನ್ಯ ರಾಜ್ಯದವರೇ ಉನ್ನತ ಸ್ಥಾನದಲ್ಲಿದ್ದಾರೆ. ಭೂಮಿ ನೀಡಿದ ಸ್ಥಳೀಯರು ಮಾತ್ರ ಹೊರಗುತ್ತಿಗೆ ಆಧಾರದಲ್ಲಿ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಇದಲ್ಲದೇ, ಆರ್ಸೆಲ್ಲಾರ್ ಮಿತ್ತಲ್ ಕಂಪನಿಗಾಗಿ ಕುಡತಿನಿ ಸುತ್ತಲೂ ಎರಡೂವರೆ ಸಾವಿರ ಎಕರೆ ಭೂಮಿಯನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿತ್ತು.
ಮಿತ್ತಲ್ ಕಂಪನಿಯೂ ಆಂಧ್ರದಲ್ಲಿ ಹೂಡಿಕೆ ಮಾಡಿದ್ದರಿಂದ ಆ ಭೂಮಿಯನ್ನು ಜಿಂದಾಲ್‌ಗೆ ಹಸ್ತಾಂತರಿಸಲು ಕೆ ಐಎಡಬಿ ಮುಂದಾಗಿತ್ತು. ಇದನ್ನು ವಿರೋಧಿಸಿ ಕಳೆದ ಒಂದೂವರೆ ವರ್ಷದಿಂದ ಭೂ ಸಂತ್ರಸ್ತರು ಧರಣಿ ನಡೆಸುತ್ತಿದ್ದಾರೆ. ಇದಲ್ಲದರೆ ನಡುವೆ ರೈಲ್ವೆ ಗೂಡ್ಸ್ ವರ್ಗಾವಣೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಹುಬ್ಬಳ್ಳಿಯ ನೈರುತ್ಯವಲಯ ವ್ಯಾಪ್ತಿಯ ಜಿಲ್ಲಾ ರೈಲ್ವೆ ಗೂಡ್ಸ್‌ಶೆಡ್ ರೈಲ್ವೆ ಇಲಾಖೆಯ ಅಧೀನದಲ್ಲಿಯೇ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಕುಡತಿನಿಗೆ ಸ್ಥಳಾಂತರ ಮಾಡುವಂತೆ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಪೂರೈಕೆ ಸಚಿವರು ಹಾಗೂ ಸಚಿವಾಲಯಕ್ಕೆ ಪತ್ರ ಬರೆದಿರುವ ಜೆಎಸ್‌ಡಬ್ಲೂೃ ಮುಖ್ಯಸ್ಥರು ಬೇಡಿಕೆಯನ್ನು ತುರ್ತು ಈಡೇರಿಸುವಂತೆ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಕುಡತಿನಿ ಬಳಿ ತಾವು ಹೊಂದಿರುವ ಖಾಸಗಿ ರೈಲ್ವೆ ಸ್ಲೈಡಿಂಗ್ ಬಗ್ಗೆ ವಿಸ್ಕ್ರತವಾಗಿ ವಿವರಿಸಿರುವ ಕಂಪನಿಯೂ ರಸಗೊಬ್ಬರ ನಿರ್ವಹಣೆಯ ರೇಕ್ ಪಾಯಿಂಟ್ ವರ್ಗಾಯಿಸಿದರೆ, ತಾವೇ ನಿರ್ವಹಣೆ ಮಾಡಿ ರಸಗೊಬ್ಬರ ಬೇಡಿಕೆ ಇರುವ ಕಂಪನಿಗಳು ಹಾಗೂ ವ್ಯಾಪಾರಿಗಳಿಗೆ ಪೂರೈಸುವುದಾಗಿ ತಿಳಿಸಿದೆ.
ನಗರದ ರೈಲ್ವೆ ಗೂಡ್ಸ್ ಶೆಡ್ ಜಿಲ್ಲೆಗೆ ಮಾತ್ರವಲ್ಲದೆ, ಸುತ್ತಲಿನ ಜಿಲ್ಲೆಗಳಿಗೂ ಅಗತ್ಯ ಸರಕು ವಿತರಣಾ ಕೇಂದ್ರದಿಂದ ರಸಗೊಬ್ಬರ, ಸಿಮೆಂಟ್, ಕಬ್ಬಿಣದ ಅದಿರು, ಆಲೂಗಡ್ಡೆ, ಅಕ್ಕಿ, ಕಟ್ಟಡ ಸಾಮಗ್ರಿಗಳನ್ನು ಸಾಗಿಸಲಾಗುತ್ತಿದೆ. ಸರಕು, ಸಾಗಣೆ, ಲೋಡ್, ಆನ್‌ಲೋಡ್‌ಗಾಗಿಯೇ ನಗರದ ರೈಲು ನಿಲ್ದಾಣದಲ್ಲಿನ ಆರು ಮತ್ತು ಎಂಟನೇ ಹಳಿಯನ್ನು ಇದಕ್ಕಾಗಿ ಮೀಸಲಿರಿಸಲಾಗಿತ್ತು. ಆದರೆ, ಇತ್ತೀಚಿಗೆ ಜಿಂದಾಲ್ ಕಂಪನಿ ಒತ್ತಡಕ್ಕೆ ಮಣಿದು ಗೂಡ್ಸ್ ರೈಲು ಸಾಗಣೆಗಾಗಿ ಎಂಟನೇ ಹಳಿಯನ್ನು ಗೂಡ್ಸ್ ಶೆಡ್‌ನಿಂದ ಬೇರ್ಪಡಿಸಲಾಗಿದೆ. ಸದ್ಯ, ಆರನೇ ಹಳಿ ಮಾತ್ರ ಉಳಿದಿದೆ.
ತಾಲೂಕಿನ ಕುಡತಿನಿಯಲ್ಲಿ ನಲವತ್ತು ಎಕರೆ ಪ್ರದೇಶವಿದ್ದು, ಹೊಸಪೇಟೆ -ಬಳ್ಳಾರಿ ವಿಭಾಗದ ಜೆಎಸ್‌ಡಬ್ಲೂೃ ಪೋರ್ಟ್ ಲಾಜೆಸ್ಟಿಕ್ಸ್ ಪ್ರೈ.ಲಿ. ಬಳಿಯಿರುವ ಖಾಸಗಿ ಸ್ಲೈಡಿಂಗ್‌ನ ಮಾಲೀಕತ್ವ ಜೆಎಸ್‌ಡಬ್ಲೂೃ ವಹಿಸಿಕೊಂಡಿದೆ. ಇದಕ್ಕೆ ರಸಗೊಬ್ಬರ ರೇಕ್ ಪಾಯಿಂಟ್‌ನ್ನೇ ವರ್ಗಾಯಿಸುವಂತೆ ಕೋರಿದೆ. ಇನ್ನೂ ಜಿಲ್ಲಾಡಳಿತ, ಸಂಬಂಧಪಟ್ಟ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸದೆ ಏಕಾಏಕಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂಬುದಾಗಿ ಅಧಿಕಾರಿ ತಿಳಿಸಿದರು.
ಜೀವನ ಸಂಕಷ್ಟ : ಇಲ್ಲಿನ ಗೂಡ್ಸ್‌ಶೆಡ್‌ನಿಂದ ನಿತ್ಯ ಎರಡೂವರೆ ಸಾವಿರದಿಂದ ಮೂರು ಸಾವಿರಕ್ಕೂ ಲಾರಿಗಳು ಸರಕು ತುಂಬಿಕೊಂಡು ಸಾಗಣೆ ಮಾಡುತ್ತಿವೆ. ಸುಮಾರು ಐದು ನೂರಕ್ಕೂ ಹೆಚ್ಚು ಲಾರಿ ಮಾಲೀಕರು, 2600ಕ್ಕೂ ಹಮಾಲರು ಇದರಿಂದ ಜೀವನ ನಡೆಸುತ್ತಿದ್ದಾರೆ. ಈ ಗೂಡ್ಸ್‌ಶೆಡ್ ಸ್ಥಳಾಂತರವಾದರೆ ಇವರೆಲ್ಲರ ಜೀವನಕ್ಕೆ ಬರೆ ಬೀಳುವುದಲ್ಲದೇ, ಸರಕು ಸಾಗಣೆ ವೆಚ್ಚ, ಟ್ರಾಫಿಕ್ ದಟ್ಟಣೆ ಹೆಚ್ಚಲಿದೆ. ಈಗಾಗಲೇ ನಗರದಿಂದ ಕುಡತಿನಿ ಹೋಗುವ ರಸ್ತೆಯಲ್ಲಿ ನಿತ್ಯವೂ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಇದರಿಂದ ಮತ್ತೋಷ್ಟು ಹೆಚ್ಚಲಿದೆ. ಸದ್ಯ, ಕೇಂದ್ರಕ್ಕೆ ಪತ್ರ ಜಿಂದಾಲ್‌ಗೆ ಯಾವುದೇ ಕಾರಣಕ್ಕೂ ಗೂಡ್ಸ್‌ಶೆಡ್ ವರ್ಗಾವಣೆ ಮಾಡಬಾರದು ಎಂಬುದಾಗಿ ಸ್ಥಳೀಯರ ಆಗ್ರಹವಾಗಿದೆ.
"
ಗೂಡ್ಸ್‌ಶೆಡ್ ವರ್ಗಾವಣೆ ಮಾಡುವಂತೆ ಕೇಂದ್ರಕ್ಕೆ ಜಿಂದಾಲ್ ಪತ್ರ ಬರೆದಿದೆ. ಸ್ಥಳೀಯರ ಹಿತದೃಷ್ಟಿಯಿಂದ ಸ್ಥಳಾಂತರದ ಬಗ್ಗೆ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ.- ಎಂ. ಸೋಮಸುಂದರ್, ಉಪನಿರ್ದೇಶಕ, ಕೃಷಿ ಇಲಾಖೆ, ಬಳ್ಳಾರಿ.