ಅಮರಾವತಿ ಎಕ್ಸ್‌ಪ್ರೆಸ್ ರೈಲನ್ನು ಕಾಕಿನಾಡದವರೆಗೆ ವಿಸ್ತರಿಸುವಂತೆ ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಅವರಿಗೆ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ಕುಡಿತಿನಿಯಲ್ಲಿ ಮನವಿ ಸಲ್ಲಿಸಿದರು. 
ಬಳ್ಳಾರಿ

ದಕ್ಷಿಣ ಭಾರತದ ಪ್ರಗತಿಗೆ ಕರ್ನಾಟಕ-ಆಂಧ್ರ ಸಹಕಾರ ಅಗತ್ಯ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಸಚಿವ ನಾರಾ ಲೋಕೇಶ್ ಹೇಳಿಕೆ
  • ಹೈದರಾಬಾದ್-ಬೆಂಗಳೂರು ಬೆಳವಣಿಗೆಗೆ ನಾಯಕರ ಧನಾತ್ಮಕ ಪೈಪೋಟಿಯೇ ಕಾರಣ

ಕುರುಗೋಡು:

ದಕ್ಷಿಣ ಭಾರತದ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಪಡಿಸಲು ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ನಾಯಕರ ನಡುವೆ ಸೌಹಾರ್ದ ಹಾಗೂ ಪರಸ್ಪರ ಸಹಕಾರ ಅತ್ಯಗತ್ಯ ಎಂದು ಆಂಧ್ರದ ಸಚಿವ ನಾರಾ ಲೋಕೇಶ್ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಹೈದರಾಬಾದ್‌ನಿಂದ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಬಳ್ಳಾರಿಗೆ ತೆರಳುವ ಮಾರ್ಗಮಧ್ಯೆ ಮಂಗಳವಾರ ಕುಡಿತಿನಿಗೆ ಭೇಟಿ ನೀಡಿ ಅವರು ಮಾತನಾಡಿದರು.
ತೆಲುಗು ಮತ್ತು ಕನ್ನಡ ಭಾಷಿಕರ ನಡುವೆ ಹಿಂದಿನಿಂದಲೂ ಆತ್ಮೀಯ ಬಾಂಧವ್ಯವಿದೆ. ಉಭಯ ರಾಜ್ಯಗಳ ಉದಯದ ಕಾಲದಿಂದಲೂ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ. ಅದರಲ್ಲೂ ಚಂದ್ರಬಾಬು ನಾಯ್ಡು ಹಾಗೂ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಧನಾತ್ಮಕ ಪೈಪೋಟಿಯೊಂದಿಗೆ ಕೆಲಸ ಮಾಡಿದ್ದರು. ಇದರ ಪರಿಣಾಮವಾಗಿಯೇ ಇಂದು ಹೈದರಾಬಾದ್ ಮತ್ತು ಬೆಂಗಳೂರು ದೇಶದ ಪ್ರಮುಖ ನಗರಗಳಾಗಿ ಏಳಿಗೆ ಕಂಡಿವೆ. ಮುಂಬರುವ ದಿನಗಳಲ್ಲೂ ಇದೇ ಪ್ರೀತಿ, ವಿಶ್ವಾಸ ಹಾಗೂ ಸಹಕಾರದಿಂದ ದಕ್ಷಿಣ ಭಾರತವನ್ನು ಪ್ರಗತಿಯತ್ತ ಕೊಂಡೊಯ್ಯಲು ಒಟ್ಟಾಗಿ ಕೆಲಸ ಮಾಡೋಣ ಎಂದರು.
ಬಳ್ಳಾರಿ ಜಿಲ್ಲೆಯೊಂದಿಗೆ ತಮ್ಮ ಕುಟುಂಬಕ್ಕೆ ವಿಶೇಷ ಹಾಗೂ ಅವಿನಾಭಾವ ಸಂಬಂಧವಿದೆ. ಸಂಕಷ್ಟದ ಸಮಯದಲ್ಲಿ ಇಲ್ಲಿನ ಜನತೆ ನೀಡಿದ ಧೈರ್ಯ ಮತ್ತು ತೋರಿಸಿದ ಪ್ರೀತಿ-ವಿಶ್ವಾಸಕ್ಕೆ ಸದಾ ಕೃತಜ್ಞನಾಗಿರುವೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಹಾಯ ಬೇಕಾದರೂ ಕೇಳಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದರು.
ಇದೇ ಸಂದರ್ಭ ಕುಡಿತಿನಿಗೆ ಆಗಮಿಸಿದ ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಅವರಿಗೆ ಕಮ್ಮ ಸಂಘದಿಂದ ಅದ್ದೂರಿ ಸ್ವಾಗತ ಕೋರಲಾಯಿತು. ಸಂಘದ ಅಧ್ಯಕ್ಷ ವಿ. ರಾಮು, ಉಪಾಧ್ಯಕ್ಷ ಸೂರ ವೆಂಕಟರಮಣಪ್ಪ, ಮುಖಂಡರಾದ ವಿ. ರಾಜಶೇಖರ, ವೆಂಕಟರಮಣ ಬಾಬು ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಮತ್ತೊಂದೆಡೆ, ಕುಡಿತಿನಿಯಲ್ಲಿ ಸಂಚರಿಸುವ ಅಮರಾವತಿ ಎಕ್ಸ್‌ಪ್ರೆಸ್ ರೈಲನ್ನು ಕಾಕಿನಾಡದವರೆಗೆ ವಿಸ್ತರಿಸುವಂತೆ ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಅವರಿಗೆ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಬಿ. ಸತ್ಯಬಾಬು ಅವರು ಮಂಗಳವಾರ ಮನವಿ ಸಲ್ಲಿಸಿದರು.