ಕುಡುತಿನಿ ಬಳಿ ಸಿಎಆರ್‌ಜಿ ಘಟಕ ನಿರ್ಮಾಣಕ್ಕೆ ಉದ್ದೇಶಿಸಿರುವ ಜಮೀನು.
ಬಳ್ಳಾರಿ : ಜಿಲ್ಲೆಯ ಕುಡುತಿನಿ ಬಳಿ ಜೆಎಸ್‌ಡಬ್ಲೂ ಮತ್ತು ಜಪಾನ್‌ನ ಜೆಎಫ್‌ಇ ಎಲೆಕ್ಟ್ರಿಕಲ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯೂ ಉದ್ದೇಶಿಸಿರುವ ಸ್ಟೀಲ್ ಘಟಕ ನಿರ್ಮಾಣಕ್ಕೆ ಏ.15ರಂದು ನಡೆಯುವ ಸಭೆಯಲ್ಲಿ ಭೂ ಸಂತ್ರಸ್ಥ ರೈತರು ಒಪ್ಪಿಗೆ ನೀಡುವವರೇ ಎಂಬ ಪ್ರಶ್ನೆ ಮೂಡಿದೆ.
ಕಳೆದ ಒಂದೂವರೆ ದಶಕದ ಹಿಂದಯೇ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಕುಡುತಿನಿ ಬಳಿಯ ವೇಣಿವೀರಾಪುರ, ಹರಗಿನಡೋಣಿ, ಸಿದ್ದಮ್ಮನಹಳ್ಳಿ ಸೇರಿದಂತೆ ವಿವಿಧಡೆ ಕೈಗಾರಿಕೆ ಸ್ಥಾಪಿಸುವುದಾಗಿ 2010ರಲ್ಲಿ ಅಂದಿನ ಬಿಜೆಪಿ ಸರ್ಕಾರ ಕೆಐಎಡಿಬಿ ಮೂಲಕ ಅತ್ಯಂತ ಕಡಿಮೆ ಬೆಲೆಗೆ 12,500 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. ಜಮೀನಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಆರ್ಸೆಲರ್ ಮಿತ್ತಲ್, ಬ್ರಾಹ್ಮಿಣಿ, ಎನ್‌ಎಂಡಿಸಿ ಕಂಪನಿಗಳು ಆರಂಭದಲ್ಲಿ ಉತ್ಸುಕ ತೋರಿದ್ದವು. ಈ ಪೈಕಿ ಎರಡೂವರೆ ಸಾವಿರಕ್ಕೂ ಅಧಿಕ ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದ್ದ ಆರ್ಸೆಲರ್ ಮಿತ್ತಲ್ ಕಂಪನಿಯೂ ಆಂಧ್ರದ ವಿಶಾಖಪಟ್ಟಣದಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದಾಗಿದೆ. ಇದೀಗ ಆರ್ಸೆಲರ್ ಮಿತ್ತಲ್ ಕಂಪನಿಗಾಗಿ ವಶಪಡಿಸಿಕೊಂಡಿದ್ದ ಭೂಮಿಯಲ್ಲಿ ಕೆಐಎಡಿಬಿಯೂ 420 ಎಕರೆ ಭೂಮಿಯನ್ನು ಜಿಂದಾಲ್‌ಗೆ ನೀಡಲಾಗಿದೆ. ಇದರಲ್ಲಿ ಜೆಎಸ್‌ಡಬ್ಲೂ ಹಾಗೂ ಜಪಾನ್‌ನ ಕಂಪನಿಯೂ 199.90 ಎಕರೆ (80.9 ಹೆಕ್ಟೇರ್) ಪ್ರದೇಶದಲ್ಲಿ ರಾಜ್ಯದ ಮೊಟ್ಟ ಮೊದಲ ‘ ಕೋಲ್ಡ್ ರೋಲ್ಡ್ ಗ್ರೈನ್ ಓರಿಯಂಟೆಡ್(ಸಿಆರ್‌ಜಿಒ) ಎಲೆಕ್ಟ್ರಿಕಲ್ ಸ್ಟೀಲ್’ ಘಟಕ ಸ್ಥಾಪಿಸಲು ಮುಂದಾಗಿದೆ.
ಮಣ್ಣು ಪರೀಕ್ಷೆಗೆ ವಿರೋಧ : ಘಟಕ ಸ್ಥಾಪನೆಯ ಸಂಬಂಧ ಮಣ್ಣು ಪರೀಕ್ಷೆಗಾಗಿ ಮಾ.11ರಂದು ಬಳ್ಳಾರಿಯ ಜಿಂದಾಲ್‌ಗೆ ಆಗಮಿಸಿದ್ದ ಜಪಾನ್‌ನ ಕಂಪನಿಯ ನಿಯೋಗವೂ ಭೂ ಸಂತ್ರಸ್ಥರ ರೈತರ ಹೋರಾಟ ಮಣ್ಣು ಪರೀಕ್ಷೆ ಮುಂದಾಗಿತ್ತು. ಈ ಹೋರಾಟದಲ್ಲಿ ಕೆಲ ರೈತರನ್ನು ಜಿಂದಾಲ್‌ನಲ್ಲಿ ಬಂಧಿಸಿ ನಗರಕ್ಕೆ ಕರೆ ತರಲಾಗಿತ್ತು. ಇದಲ್ಲದೆ, ಎಡಿಸಿ ಮಾತಿಗೂ ಸ್ಪಂದಿಸಿದೆ ಕೆಲ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಮಣ್ಣು ಪರೀಕ್ಷೆಗೆ ಬಾರಿ ವಿರೋಧ ವ್ಯಕ್ತಪಡಿಸಿದ್ದರು. ಈ ನಡುವೆಯೂ ಜಿಲ್ಲಾಡಳಿತ ಹಾಗೂ ಪೊಲೀಸರ ಭದ್ರತೆಯೊಂದಿಗೆ ಜಪಾನ್ ಕಂಪನಿಯೂ ಜಿಂದಾಲ್ ಕಂಪನಿಯ ಹಿಂಬದಿಯ ಗೇಟ್‌ನಿಂದ ಘಟಕ ಸ್ಥಾಪನೆಗೆ ಸ್ಥಳಕ್ಕೆ ತೆರಳಿ ಯಶ್ವಸಿಯಾಗಿ ಮಣ್ಣು ಪರೀಕ್ಷೆ ನಡೆಸಿದ್ದಾರೆ. ಸದ್ಯ, ಜಪಾನ್‌ನ ಕಂಪನಿಯೂ ಸಿಆರ್‌ಜಿಒ ಘಟಕ ತೆರೆಯಲು ಉತ್ಸುಕರಾಗಿದ್ದು ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದರೆ ಕೈಗಾರಿಕೆ ಆರಂಭಿಸಲಿದೆ. ಉದ್ಯಮ ಆರಂಭವಾದರೆ 1250 (909 ನೇರ, 341 ಪರೋಕ್ಷ) ಉದ್ಯೋಗಗಳನ್ನು ನೀಡುವುದು. ಅಲ್ಲದೆ, ಕಾರ್ಪೋರೇಟ್ ಪರಿಸರ ಹೊಣೆ (ಸಿಇಆರ್) ಅಡಿಯಲ್ಲಿ ಆರು ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದೆ.
ಏ.15ಕ್ಕೆ ಸಭೆ : ಮಿತ್ತಲ್ ಕಂಪನಿಗಾಗಿ 2,643 ಎಕರೆ ಹಂಚಿಕೆಯಾಗಿತ್ತು. ಈ ಭೂಮಿಗೆ ಪ್ರತಿಯಾಗಿ ರೈತರಿಗೆ ದಶಕದ ಹಿಂದಯೇ ಪರಿಹಾರ ವಿತರಿಸಲಾಗಿದೆ. ಈ ಪರಿಹಾರ ನ್ಯಾಯಯುತವಾಗಿಲ್ಲ ಎಂದು ಆರೋಪಿಸಿ ಕೆಲ ರೈತರು ಹೋರಾಟ ನಡೆಸುತ್ತಿದ್ದಾರೆ. ಮಿತ್ತಲ್‌ಗೆ ಮೀಸಲಿಟ್ಟಿದ್ದ ಭೂಮಿ ಪೈಕಿ 199 ಎಕರೆ ಮಾತ್ರ ಸಿಆರ್‌ಜಿಒ ಘಟಕಕ್ಕೆ ಮಾತ್ರ ಕೆಐಎಡಿಬಿ ನೀಡಿದೆ. ಈಗಾಗಲೇ ಘಟಕಕ್ಕೆ ಪರಿಸರ ಅನುಮೋದನೆಯೂ ಸಿಕ್ಕಿದೆ. ಸದ್ಯ, ಭೂಮಿಗೆ ನೀಡಿದ ಪರಿಹಾರ ನ್ಯಾಯಯುತವಾಗಿಲ್ಲ, ಕೋರ್ಟ್ ಆದೇಶದಂತೆ ಭೂಮಿಗೆ ಬೆಲೆ ನೀಡದೆ ಕಂಪನಿ ಆರಂಭಿಸಲು ಬಿಡುವುದಿಲ್ಲ ಎಂಬುದಾಗಿ ರೈತರು ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಕುಡಿತಿನಿಯಲ್ಲಿ ಸರ್ಕಾರ ವಿರುದ್ಧ ಭೂ ಸಂತ್ರಸ್ತ ರೈತರು ಅನಿರ್ಧಿಷ್ಟಾವಧಿ ಧರಣಿ ಕೈಗೊಂಡು ಏ.14ಕ್ಕೆ 1215 ದಿನಕ್ಕೆ ಕಾಲಿಟ್ಟಿದೆ. ಸಿಆರ್‌ಜಿಒ ಘಟಕ ಸಂಬಂಧ ರೈತರೊಂದಿಗೆ ಏ. 4ರಂದು ಸಭೆ ಕರೆಯಲಾಗಿತ್ತು. ಆದರೆ, ಸಂಸದ ಹಾಗೂ ಜಿಲ್ಲೆಯ ಕೆಲ ಶಾಸಕರ ಗೈರು ಹಿನ್ನೆಲೆ ಸಭೆ ರದ್ದುಗೊಂಡಿತು. ಏ.15ರಂದು ಸಭೆ ಕರೆದಿದ್ದು ರೈತರ ಜತೆಗೆ ಸಭೆ ಸಂಧಾನವೂ ಅಥವಾ ವಿಫಲವೋ ಕಾದು ನೋಡಬೇಕಿದೆ.
ಕೋಟ್... ಏ. 4ರಂದು ರೈತರೊಂದಿಗೆ ಸಭೆ ಕೆಲ ಕಾರಣದಿಂದ ರದ್ದುಗೊಂಡಿತು. ಏ.15ರ ಸಭೆಯಲ್ಲಿ ರೈತರ ಬೇಡಿಕೆಗಳನ್ನು ಸರ್ಕಾರ ಮುಂದೆ ಪ್ರಸ್ತಾಪಿಸಲಾಗುವುದು.
- ನಾಗೇಂದ್ರ ಪ್ರಸಾದ್ ಕೆ. ಡಿಸಿ, ಬಳ್ಳಾರಿ