ಕುಡತಿನಿಯಲ್ಲಿ ನ್ಯಾಯಯುತ ಪರಿಹಾರಕ್ಕಾಗಿ ಭೂ ಸಂತ್ರಸ್ತರು ಹೋರಾಟ ನಡೆಸುತ್ತಿರುವುದು.
- ಬಿಡದಿಗಿಂತಲೂ ಬೃಹತ್ ವಿವಾದ
- ಗಣಿ ಜಿಲ್ಲೆಯ ನಾಯಕರ ಇಚ್ಛಾಶಕ್ತಿ ಕೊರತೆ
- ಕೈಗಾರಿಕೆಯೂ ಇಲ್ಲ, ಕೃಷಿಯೂ ನಡೆಯುತ್ತಿಲ್ಲ
ಬಳ್ಳಾರಿ : ಬಿಡದಿ ಟೌನ್‌ಶಿಪ್ ವಿಚಾರವಾಗಿ ಎರಡು ಪ್ರಬಲ ರಾಜಕೀಯ ಪಕ್ಷಗಳ ನಾಯಕರ ಹಗ್ಗಜಗ್ಗಾಟ ದಿನೇದಿನೆ ತಾರಕಕ್ಕೇರುತ್ತ ಇಡೀ ಕರ್ನಾಟಕದ ಗಮನ ಸೆಳೆಯುತ್ತಿದೆ. ಆದರೆ, ರಾಜಕೀಯ ಲಾಭದ ಬಿಡದಿ ವಿವಾದಕ್ಕೆ ಸಿಗುತ್ತಿರುವ ಪ್ರಚಾರ ಹಾಗೂ ಮನ್ನಣೆಯ ಅರ್ಧದಷ್ಟು ತೀವ್ರತೆಯೂ ಜಿಲ್ಲೆಯ ಕುಡತಿನಿ ಹೋರಾಟಕ್ಕೆ ಸಿಗುತ್ತಿಲ್ಲ.
ವಾಸ್ತವದಲ್ಲಿ ಕಳೆದುಕೊಂಡ ಭೂಮಿಯ ವಿಸ್ತೀರ್ಣ, ಕೈಗಾರಿಕೆಗಳ ಅಂದಾಜು ಹೂಡಿಕೆ ವೆಚ್ಚ ಹಾಗೂ ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ರೈತ ಕುಟುಂಬಗಳ ಜೀವನದ ಲೆಕ್ಕಾಚಾರಗಳನ್ನು ನೋಡಿದರೆ ಬಿಡದಿಗಿಂತಲೂ ಕುಡತನಿಯದೇ ಅತ್ಯಂತ ಬೃಹತ್ ಸಮಸ್ಯೆಯಾಗಿದೆ. ಆದಾಗ್ಯೂ, 15 ವರ್ಷಗಳ ಹಿಂದೆಯೇ ಕೈಗಾರಿಕಾ ಕ್ರಾಂತಿಯ ಹೆಸರಿನಲ್ಲಿ ಸಹಸ್ರಾರು ಎಕರೆ ಫಲವತ್ತಾದ ಭೂಮಿಯನ್ನು ತ್ಯಾಗ ಮಾಡಿದ ಇಲ್ಲಿನ ರೈತರ ಬದುಕು ಇತ್ತ ಕೃಷಿಯೂ ಇಲ್ಲದೆ, ಅತ್ತ ಉದ್ಯೋಗವೂ ಸಿಗದೆ ಜಾಲಿಯ ಕಂಟಿಗಳ ನಡುವೆ ಅತಂತ್ರವಾಗಿ ಕಣ್ಣೀರು ಸುರಿಸುತ್ತಿದೆ.
ಕಳೆದ 2010ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಡೂರು ತಾಲೂಕಿನ ಮಳೆಯಾಶ್ರಿತ ಪ್ರದೇಶದ ಜನರಿಗೆ ಸ್ಥಳೀಯವಾಗಿ ಉದ್ಯೋಗದ ಆಸೆ ತೋರಿಸಿ ಕೆಐಎಡಿಬಿ ಮೂಲಕ ಒಟ್ಟು 12,100 ಎಕರೆ ಜಮೀನನ್ನು ಎಕರೆಗೆ ಕೇವಲ ಎಂಟು ಲಕ್ಷ ರೂ.ನಂತೆ ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಆರ್ಸೆಲರ್ ಮಿತ್ತಲ್ 5,300 ಎಕರೆ, ಬ್ರಾಹ್ಮಿಣಿ 5,000 ಎಕರೆ ಹಾಗೂ ಎನ್‌ಎಂಡಿಸಿ 2,700 ಎಕರೆ ಭೂಮಿಯನ್ನು ಪಡೆದುಕೊಂಡಿದ್ದವು. ಆದರೆ, ಅಂದಿನ ಕಡಿಮೆ ದರದ ಪರಿಹಾರಕ್ಕೆ ಒಪ್ಪದ 600 ಎಕರೆಯ ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಸುದೀರ್ಘ ಕಾನೂನು ಹೋರಾಟದ ಫಲವಾಗಿ 2025ರಲ್ಲಿ ನ್ಯಾಯಾಲಯವು ಆ ರೈತರಿಗೆ ಎಕರೆಗೆ 1.40 ಕೋಟಿ ರೂಪಾಯಿ ಬೃಹತ್ ಪರಿಹಾರ ನೀಡುವಂತೆ ಐತಿಹಾಸಿಕ ಆದೇಶ ಪ್ರಕಟಿಸಿತು. ಈ ತೀರ್ಪಿನಿಂದ ಜಾಗೃತರಾದ ಉಳಿದ 12,100 ಎಕರೆಯ ಭೂಸಂತ್ರಸ್ತ ರೈತರು ತಮಗಾಗಿರುವ ಘೊರ ಅನ್ಯಾಯ ಪ್ರತಿಭಟಿಸಿ, 1,295 ದಿನಗಳಿಂದ ನಿರಂತರ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.
ತಮ್ಮ ಹಕ್ಕಿನ ನ್ಯಾಯಯುತ ಪರಿಹಾರಕ್ಕಾಗಿ ರೈತರು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆಯನ್ನೂ ನಡೆಸಿದ್ದರು. ಬೃಹತ್ ಪ್ರತಿಭಟನಾ ಮೆರವಣಿಗೆಗಳನ್ನು ಸಂಘಟಿಸಿದರು. ಬಳ್ಳಾರಿ ಬಂದ್ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಆಕ್ರೋಶ ಹೊರಹಾಕಿದ್ದರು. ಕಳೆದುಕೊಂಡ ತಮ್ಮದೆ ಭೂಮಿಗೆ ಎತ್ತಿನ ಬಂಡಿಗಳ ಮೂಲಕ ಮೆರವಣಿಗೆ ಹೊರಟು ವಿಭಿನ್ನವಾಗಿ ಹೋರಾಡಿದರೂ ಸರ್ಕಾರ ಮಾತ್ರ ಪೊಲೀಸ್ ಬಲಪ್ರಯೋಗದ ಮೂಲಕ ಇವರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡಿತು. ದುರಂತವೆಂದರೆ, 2010ರಲ್ಲೇ ಅಲ್ಪ ಮೊತ್ತದ ಹಣ ಪಡೆದಿದ್ದ ರೈತರು ಜಮೀನನ್ನು ಕಂಪನಿಗಳಿಗೆ ಬಿಟ್ಟುಕೊಡುವುದಾಗಿ ಎಲ್ಲ ಒಪ್ಪಂದದ ಪತ್ರಗಳಿಗೆ ಸಹಿ ಹಾಕಿರುವುದರಿಂದ, ಇಂದು ಕಾನೂನಾತ್ಮಕ ದಾಖಲೆಗಳೆಲ್ಲವೂ ಉದ್ಯಮಗಳ ಪರವಾಗಿಯೇ ಗಟ್ಟಿಯಾಗಿ ನಿಂತಿವೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಸ್ಥಳೀಯ ರೈತರ ತೀವ್ರ ವಿರೋಧ ಹಾಗೂ ಭೂಹೋರಾಟದ ಹಿನ್ನೆಲೆಯಲ್ಲಿ ಬೇಸತ್ತ ಆರ್ಸೆಲರ್ ಮಿತ್ತಲ್ ಕಂಪನಿಯು ಬಳ್ಳಾರಿಯ ಬೃಹತ್ ಯೋಜನೆಯಿಂದ ಹಿಂದೆ ಸರಿದು, ಈಗ ನೆರೆಯ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ 60 ಸಾವಿರ ಕೋಟಿ ರೂಪಾಯಿ ಬೃಹತ್ ಹೂಡಿಕೆಯೊಂದಿಗೆ ಕೈಗಾರಿಕೆ ಸ್ಥಾಪಿಸಲು ಮುಂದಾಗಿದೆ. ಇದರ ಬೆನ್ನಲ್ಲೇ ಜೆಎಸ್‌ಡಬ್ಲ್ಯು ಹಾಗೂ ಜಪಾನ್‌ನ ಜೆಎಫ್‌ಇ ಸಂಸ್ಥೆಗಳು ಜಂಟಿಯಾಗಿ ಆರಂಭಿಸಬೇಕಾಗಿದ್ದ ನೂತನ ಸ್ಟೀಲ್ ಘಟಕದ ಕಾರ್ಯವೂ ಭೂಸಂತ್ರಸ್ತರ ಅಡ್ಡಿಯಿಂದಾಗಿ ಸಂಪೂರ್ಣ ಸ್ಥಗಿತಗೊಂಡಿದೆ. ಕರ್ನಾಟಕ ಸರ್ಕಾರದ ಅಸಹಕಾರ ಮತ್ತು ಮೂಲಸೌಕರ್ಯ ಒದಗಿಸುವಲ್ಲಿನ ವಿಳಂಬ ನೀತಿಯಿಂದಾಗಿ ಉದ್ಯಮಗಳು ಆಂಧ್ರದತ್ತ ವಲಸೆ ಹೋಗುತ್ತಿವೆ. ಇತ್ತೀಚೆಗೆ ಬಳ್ಳಾರಿಯಲ್ಲೇ ಘಟಕ ತೆರೆಯಲು ಉತ್ಸುಕವಾಗಿದ್ದ ಕಿಯಾ ಶೋ ರೂಮ್ ಕಂಪನಿಗೆ ಸೂಕ್ತ ಬೆಂಬಲ ಸಿಗದ ಕಾರಣ ಅದು ಆಂಧ್ರದ ಅನಂತಪುರಕ್ಕೆ ಸ್ಥಳಾಂತರಗೊಂಡಿತು. ಅದರ ಫಲವಾಗಿ ಇಂದು ಅಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ಸಿಕ್ಕಿದ್ದು, ಬಳ್ಳಾರಿಯ ಯುವಕರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಒಂದೂವರೆ ದಶಕದ ಹಿಂದೆ ವಶಪಡಿಸಿಕೊಂಡ ಸಹಸ್ರಾರು ಎಕರೆ ಭೂಮಿಯಲ್ಲಿ ಇಂದು ಕೈಗಾರಿಕೆಯೂ ತಲೆಯೆತ್ತದೆ, ಕೃಷಿಯೂ ನಡೆಯದೆ ಕೇವಲ ಕರಾವಳಿ ಜಾಲಿ ಮುಳ್ಳುಗಳು ಮಾತ್ರ ಸಾಮ್ರಾಜ್ಯ ಸ್ಥಾಪಿಸಿವೆ.
ಬಿಡದಿಯಲ್ಲಿ ಬೃಹತ್ ಟೌನ್‌ಶಿಪ್ ನಿರ್ಮಿಸಲು ಸರ್ಕಾರ ಹಠಕ್ಕೆ ಬಿದ್ದಿದ್ದರೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅದನ್ನು ತಡೆಯಲು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಇದೇ ಕುಮಾರಸ್ವಾಮಿ ಅವರು ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಕುಡತಿನಿಯ ಪ್ರತಿಭಟನಾ ನಿರತ ರೈತರ ಧರಣಿ ಸ್ಥಳಕ್ಕೆ ಬಂದು, ತಾವು ಅಧಿಕಾರಕ್ಕೆ ಬಂದರೆ ನ್ಯಾಯಯುತ ಪರಿಹಾರ ಕೊಡಿಸಿ ಇಲ್ಲಿಯೇ ಉದ್ಯಮ ಆರಂಭಿಸುವುದಾಗಿ ಆಣೆ ಮಾಡಿದ್ದರು. ಆದರೆ, ಬಳ್ಳಾರಿಯಿಂದ ವಿಶಾಖಪಟ್ಟಣಕ್ಕೆ ವಲಸೆ ಹೋದ ಆರ್ಸೆಲರ್ ಮಿತ್ತಲ್ ಕಂಪನಿಯ ನೂತನ ಯೋಜನೆಗೆ ಇತ್ತೀಚೆಗೆ ಸ್ವತಃ ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ಅವರೇ ಚಾಲನೆ ನೀಡಿರುವುದು ವಿಪರ್ಯಾಸ. ಅವಳಿ ಜಿಲ್ಲೆಯ ಹನ್ನೊಂದು ಶಾಸಕರು ಹಾಗೂ ಒಬ್ಬ ಸಂಸದರಿಗೆ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಉಳಿಸಿಕೊಳ್ಳಬೇಕೆಂಬ ಯಾವುದೇ ದೂರದೃಷ್ಟಿ ಇಲ್ಲದಂತಾಗಿದೆ. ಕೇವಲ ಬೂಟಾಟಿಕೆಯ ರಾಜಕೀಯ ಹೇಳಿಕೆಗಳನ್ನು ನೀಡುವುದರಲ್ಲಿ ನಿಸ್ಸೀಮರಾಗಿರುವ ಗಟ್ಟಿತನದ ನಾಯಕರ ಕೊರತೆಯಿಂದಾಗಿ ಬಳ್ಳಾರಿ ಜಿಲ್ಲೆಯ ಕೈಗಾರಿಕಾ ಪ್ರಗತಿ ಮತ್ತು ಯುವಕರ ಭವಿಷ್ಯ ಪಾತಾಳಕ್ಕೆ ಕುಸಿದಿದೆ.
"
ಕೋಟ್: ಕುಡತಿನಿಯ ಭೂ ಸಂತ್ರಸ್ತ ರೈತರಿಗೆ ಕೋರ್ಟ್ ಆದೇಶದಂತೆ ನ್ಯಾಯಯುತ ಪರಿಹಾರ ಒದಗಿಸಿ ಕೈಗಾರಿಕೆ ಆರಂಭಿಸಲಿ.- ಯು.ಬಸವರಾಜ್, ಅಧ್ಯಕ್ಷ, ಪ್ರಾಂತ ರೈತ ಹೋರಾಟ ಸಂಘ
"
ಕೋಟ್: ಕುಡತಿನಿ ಭೂ ಸಂತ್ರಸ್ತ ರೈತರಿಗೆ ನ್ಯಾಯಯುತ ಪರಿಹಾರ ಕೊಡುವುದು ವಿಶೇಷ ಭೂಸ್ವಾಧೀನ ಕಚೇರಿಗೆ ಸಂಬಂಧಿಸಿದ್ದು, ಆ ಇಲಾಖೆಯೇ ನಿರ್ಧರಿಸಬೇಕಿದೆ.- ಆರ್.ಜನಾರ್ದನ, ಜಿಲ್ಲಾ ಅಭಿವೃದ್ಧಿ ಅಧಿಕಾರಿ (ಡಿಡಿಒ) ಕೆಐಎಡಿಬಿ, ಬಳ್ಳಾರಿ