ಬಳ್ಳಾರಿ : ರಾಜ್ಯದಲ್ಲಿ ಖಾಲಿಯಿರುವ 56 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆಯಲ್ಲಿ ಒಳ ಮೀಸಲಾತಿ ಅನ್ವಯಿಸಬೇಕು ಎಂದು ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ ಪ್ರತಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
ಒಳಮೀಸಲಾತಿ ಜಾರಿಯು ಕೇವಲ ರಾಜಕೀಯ ನಿರ್ಧಾರವಲ್ಲ, ಅದು ಸಂವಿಧಾನದ ಆಶಯ ಈಡೇರಿಸುವ ಮಹತ್ವದ ಹೆಜ್ಜೆಯಾಗಿದೆ. ಕಾಂಗ್ರೆಸ್ ಮೊದಲಿನಿಂದಲೂ ಸಾಮಾಜಿಕ ನ್ಯಾಯದ ಪರವಾಗಿ ನಿಂತಿದೆ. ಆದರೆ, ಇಂದು ಪಕ್ಷದ ಕೆಲವು ನಾಯಕರು ಒಳಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಬಿಜೆಪಿ ಮೊದಲಿನಿಂದಲೂ ಮೀಸಲಾತಿ ವಿರೋದಿ ಧೋರಣೆ ಹೊಂದಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಿ, ಅತೀ ಹಿಂದುಳಿದ ಜಾತಿಗಳ ಏಳಿಗೆಗೆ ಶ್ರಮಿಸಬೇಕು. ರಾಜ್ಯದ ಅತೀ ಹಿಂದುಳಿದ ಸಮುದಾಯಗಳು ಮೊದಲಿನಿಂದಲೂ ಕಾಂಗ್ರೆಸ್ ಬೆಂಬಲಕ್ಕೆ ನಿಂತಿವೆ. ಅವರ ವಿಶ್ವಾಸವನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಕೂಡಲೇ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸಿ ಒಳಮೀಸಲಾತಿ ಜಾರಿಗೆ ಕಟಿಬದ್ಧವಾಗಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.