ಬಳ್ಳಾರಿಯ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಟಾಸ್ಕ್ ಪೋರ್ಸ್ ಸಭೆಯಲ್ಲಿ ಡಿಸಿ ಕೆ.ನಾಗೇಂದ್ರ ಪ್ರಸಾದ್, ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಡಿಸಿಎಫ್ ಡಾ.ಎನ್.ಬಸವರಾಜ್ ಇದ್ದರು. 
ಬಳ್ಳಾರಿ

ಮೇಲ್ವಿಚಾರಣೆ ಚುರುಕುಗೊಳಿಸಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಕ್ವಾರಿಗಳನ್ನು ತಕ್ಷಣವೇ ಪರಿಶೀಲಿಸಿ

ಬಳ್ಳಾರಿ :

ಜಿಲ್ಲೆಯ ಬಹುತೇಕ ಗಣಿಗಾರಿಕೆ ಚಟುವಟಿಕೆಗಳು ಸಂಡೂರು ಭಾಗದಲ್ಲೇ ಕೇಂದ್ರೀಕೃತವಾಗಿರುವುದರಿಂದ, ದೈನಂದಿನ ಮೇಲ್ವಿಚಾರಣೆ ಹಾಗೂ ಜಂಟಿ ತಪಾಸಣೆ ಚುರುಕುಗೊಳಿಸಬೇಕು ಎಂದು ಡಿಸಿ ಕೆ.ನಾಗೇಂದ್ರ ಪ್ರಸಾದ್ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮರಳು ಸಮಿತಿ ಮತ್ತು ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಮತ್ತು ನಿಯಂತ್ರಣದ ಪ್ರಾಧಿಕಾರದಿಂದ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಟಾಸ್ಕ್ ಪೋರ್ಸ್ ಸಭೆಯಲ್ಲಿ ಮಾತನಾಡಿದರು. ಸಂಡೂರಿನಲ್ಲಿ ಗಣಿ ಇಲಾಖೆಯ ಕ್ಯಾಂಪ್ ಆಫೀಸ್ ತೆರೆಯಲು ಪ್ರಸ್ತಾವನೆ ಸಲ್ಲಿಸಬೇಕು. ಕಳೆದ ವರ್ಷ ಶೇ. 96 ರಷ್ಟು ರಾಜಸ್ವ ಸಂಗ್ರಹ ಗುರಿ ತಲುಪಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಶೇ. 98 ರಷ್ಟು ಗುರಿ ಸಾಧನೆ ಮಾಡಲೇಬೇಕು. ಗಣಿಗಾರಿಕೆಯಿಂದ ಅದಾಯದ ಜತೆಗೆ ನೈಸರ್ಗಿಕ ಪರಿಸರ ಹಾಗೂ ಜೀವವೈವಿಧ್ಯಕ್ಕೆ ಧಕ್ಕೆಯಾಗದಂತೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯತೆಯ ಬಗ್ಗೆಯೂ ಕ್ರಮವಹಿಸಬೇಕು ಎಂದರು.
ಜಿಲ್ಲೆಯಲ್ಲಿ ನಿಯಮಬಾಹಿರವಾಗಿ ಕಾರ್ಯಾಚರಣೆ ನಡೆಸುತ್ತಿರುವ ಕ್ವಾರಿ ಹಾಗೂ ಕ್ರಷರ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕಟ್ಟಡ ಕಲ್ಲು, ಅಲಂಕಾರಿಕ ಕಲ್ಲು, ಮುರಂ ಹಾಗೂ ಮರಳು ಸೇರಿದಂತೆ ಒಟ್ಟು 89 ಕ್ವಾರಿ ಗುತ್ತಿಗೆಗಳು ಮಂಜೂರಾಗಿದ್ದು, ಇವುಗಳಲ್ಲಿ ಪ್ರಸ್ತುತ 59 ಕ್ವಾರಿಗಳು ಮಾತ್ರ ಚಾಲ್ತಿಯಲ್ಲಿವೆ. ಉಳಿದ 30 ಕ್ವಾರಿಗಳು ಯಾವುದೇ ಚಟುವಟಿಕೆ ಇಲ್ಲದೆ ನಿಷ್ಕಿಯಗೊಂಡಿವೆ. ಒಂದು ವರ್ಷಕ್ಕೂ ಹೆಚ್ಚು ಕಾಲ ನಿಷ್ಕಿಯವಾಗಿರುವ ಕ್ವಾರಿಗಳನ್ನು ತಕ್ಷಣವೇ ಪರಿಶೀಲಿಸಿ, ನಿಯಮಾನುಸಾರ ಅವುಗಳ ಗುತ್ತಿಗೆಯನ್ನು ರದ್ದುಪಡಿಸಲು ಕ್ರಮವಹಿಸಬೇಕು ಎಂದರು.
ಸುಪ್ರೀಂ ಕೋರ್ಟ್ ಆದೇಶದಂತೆ ರಸ್ತೆ ಮೂಲಕ ಅದಿರು ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಕನ್ವೇಯರ್ ಬೆಲ್ಟ್ ಹಾಗೂ ರೈಲ್ವೆ ಸೈಡಿಂಗ್ ಮೂಲಕವೇ ಸಾಗಿಸಬೇಕಿದೆ. ಪ್ರಸ್ತುತ ಎನ್‌ಎಂಡಿಸಿ ವಾರ್ಷಿಕ ಸುಮಾರು 8.6 ರಿಂದ 15 ಮಿಲಿಯನ್ ಮೆಟ್ರಿಕ್ ಟನ್ ಅದಿರು ಉತ್ಪಾದಿಸುತ್ತಿದ್ದರೂ, ಪ್ರಸ್ತುತ ಇರುವ ಎಸ್ಪಿ-2 ಕನ್ವೇಯರ್ ಸಾಮರ್ಥ್ಯ ಕೇವಲ 3 ರಿಂದ 4 ಮಿಲಿಯನ್ ಮೆಟ್ರಿಕ್ ಟನ್ ಮಾತ್ರ ಇರುವುದು ಕಂಡುಬಂದಿದೆ. ರಸ್ತೆ ಸಾರಿಗೆ ಪೂರ್ಣ ಪ್ರಮಾಣದಲ್ಲಿ ತಡೆಗಟ್ಟಲು ಕನ್ವೇಯರ್ ಬೆಲ್ಟ್ ಮೂಲಸೌಕರ್ಯ ಸಾಮರ್ಥ್ಯವನ್ನು ತಕ್ಷಣವೇ ವಿಸ್ತರಿಸುವಂತೆ ಎನ್‌ಎಂಡಿಸಿಗೆ ಅಧಿಕೃತ ನೋಟಿಸ್ ಜಾರಿ ಮಾಡಬೇಕು ಎಂದು ಡಿಎಂಜಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ರಾಮ್ ಜಿ ನಾಯ್ಕ್ ಮಾತನಾಡಿ, 2026-27ನೇ ಸಾಲಿನಲ್ಲಿ ರಾಜ್ಯದ ಪ್ರಮುಖ ಖನಿಜಗಳಿಂದ ಒಟ್ಟು 8,000 ಕೋಟಿ ರೂ. ರಾಜಸ್ವ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಇದರಲ್ಲಿ ಬಳ್ಳಾರಿ ಜಿಲ್ಲೆಯೊಂದಕ್ಕೇ 6,250 ಕೋಟಿ ರೂ. (ಶೇ. 78) ಗುರಿ ನಿಗದಿಪಡಿಸಲಾಗಿದೆ. 2025- 26ನೇ ಸಾಲಿನಲ್ಲಿ ನಿಗದಿಯಾಗಿದ್ದ 5,200 ಕೋಟಿ ರೂ. ಗುರಿಯಲ್ಲಿ 4,922 ಕೋಟಿ ರೂ. (ಶೇ. 96) ಸಂಗ್ರಹಿಸಿ ಉತ್ತಮ ಸಾಧನೆ ತೋರಿತ್ತು. ಜುಲೈ ಅಂತ್ಯದವರೆಗೆ ನಿಗದಿಯಾಗಿದ್ದ 2,250 ಕೋಟಿ ರೂ. ಪ್ರಗತಿಪರ ಗುರಿಯ ಪೈಕಿ 1,345.46 ಕೋಟಿ ರೂ. (ಶೇ. 59.8) ಸಂಗ್ರಹವಾಗಿದೆ. ಕಳೆದ ಮೂರು ತಿಂಗಳಿಗೆ ಹೋಲಿಸಿದರೆ ಜುಲೈ ತಿಂಗಳಲ್ಲಿ 28 ಕೋಟಿ ರೂ. ಯಷ್ಟು ಅಧಿಕ ರಾಜಸ್ವ ಸಂಗ್ರಹ ದಾಖಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.