- ಎಐಸಿಸಿ ಉಪಾಧ್ಯಕ್ಷ ಜಾವಿದ್ ಹೇಳಿಕೆ
ಬಳ್ಳಾರಿ : ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಡಿಲಿಮಿಟೇಷನ್ (ಕ್ಷೇತ್ರ ಮರು ವಿಂಗಡಣೆ) ಪ್ರಕ್ರಿಯೆಯಿಂದ ದಕ್ಷಿಣ ಭಾರತದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ತಗ್ಗಲಿದೆ ಎಂದು ಎಐಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ನದೀಮ್ ಜಾವಿದ್ ಹೇಳಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದಿಂದಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇಶದಲ್ಲಿ ಕ್ಷೇತ್ರ ಮರುವಿಂಗಡನೆ ಜಾರಿಯಾದರೆ ಉತ್ತರ ಭಾರತದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ದಕ್ಷಿಣದ ರಾಜ್ಯಗಳ ಪ್ರತಿನಿಧಿತ್ವ ಕಡಿಮೆಯಾಗುವ ಆತಂಕವಿದೆ. ಜನಸಂಖ್ಯೆ ನಿಯಂತ್ರಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವ ರಾಜ್ಯಗಳಿಗೆ ಈ ಪ್ರಕ್ರಿಯೆಯಿಂದ ಅನ್ಯಾಯವಾಗಲಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಂಗ್ರೆಸ್‌ನಿಂದ ಸಂಘಟನ್ ಸೃಜನ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳನ್ನು ಅಪರಾಧಿಗಳಂತೆ ನಡೆಸಿಕೊಂಡಿದ್ದು, ನ್ಯಾಯ ಕೇಳುವ ಪರಿಸ್ಥಿತಿಯನ್ನೇ ಪ್ರಶ್ನಿಸುವ ವಾತಾವರಣ ನಿರ್ಮಿಸಿದೆ ಎಂದು ಟೀಕಿಸಿದರು. ವಿದ್ಯಾರ್ಥಿಗಳ ಪರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿಂತಿದ್ದಾರೆ. ವಿದ್ಯಾರ್ಥಿಗಳ ನ್ಯಾಯಸಮ್ಮತ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ಬೆಂಬಲ ಮುಂದುವರಿಯಲಿದೆ. ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗಾಗಿ ಕಾಂಗ್ರೆಸ್ ಜನಾಂದೋಲನ ರೂಪಿಸಲಿದೆ ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಮುಖಂಡರಾದ ಎಲ್.ಮಾರೆಣ್ಣ, ಈರನಗೌಡ, ಅಲುವೇಲು ಸುರೇಶ್, ಬೋಯಪಾಟಿ ವಿಷ್ಣು ಇತರರಿದ್ದರು.