ಕುರುಗೋಡಿನಲ್ಲಿ ಹುಣಸೆಕಾಯಿ ವ್ಯಾಪಾರ ಮಾಡುತ್ತಿರುವುದು.
ಕುರುಗೋಡು: ಕಳೆದ ಮೂರು ವರ್ಷದಿಂದ ಅಪರೂಪವಾಗಿದ್ದ ಹುಣಸೆಕಾಯಿ ಪಟ್ಟಣದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದರಿಂದ ಗ್ರಾಹಕರು ಖರೀದಿಸಲು ಮುಗಿಬಿದ್ದಿದ್ದಾರೆ.
ತಾಲೂಕಿನ ಮುಷ್ಟುಗಟ್ಟೆ, ಶ್ರೀನಿವಾಸ್ ನಗರ, ಗೆಣಿಕೆಹಾಳ್, ಸಿಂಧಿಗೇರಿ, ಬೈಲೂರು, ಲಕ್ಷ್ಮೀಪುರ, ಗುತ್ತಿಗನೂರು ಸೇರಿದಂತೆ ಇತರೆಡೆ ಹುಣಸೆ ಮರಗಳಿವೆ. ಆದರೆ ಕಳೆದ ಮೂರು ವರ್ಷದಿಂದ ರೋಗಬಾಧೆಯಿಂದಾಗಿ ಕಾಯಿ ಬಿಟ್ಟಿರಲಿಲ್ಲ. ಹುಣಸೆ ಮರಗಳು ಕೂಡ ಸಂಪೂರ್ಣ ಒಣಗಿದ್ದವು. ಇದರಿಂದಾಗಿ ಹುಣಸೆಚಟ್ನಿ ಪ್ರಿಯರು ಅಂಗಡಿಗಳಲ್ಲಿ ಉಪ್ಪಿನಕಾಯಿ ಖರೀದಿಸುವಂತಾಗಿತ್ತು.
ಆದರೆ ಈ ಬಾರಿ ತಾಲೂಕಿನ ಬಹುತೇಕ ಕಡೆ ಹಣಸೆಕಾಯಿ ಸೊಂಪಾಗಿ ಹಿಡಿದಿದ್ದು ಉತ್ತಮ ಇಳುವರಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಪಟ್ಟಣದ ಮಾರುಕಟ್ಟೆಯಲ್ಲಿ ಹುಣಸೆಕಾಯಿ ಒಂದು ಮಣಕ್ಕೆ (12 ಕೆಜಿ) 300 ರಿಂದ 400 ರೂ.ಗೆ ಮಾರಾಟವಾಗುತ್ತಿದೆ. ದಲ್ಲಾಳಿಗಳು ರೈತರಿಗೆ ಒಂದು ಮರಕ್ಕೆ 1800 ರಿಂದ ಎರಡು ಸಾವಿರ ರೂ. ನೀಡಿ ವ್ಯಾಪಾರಕ್ಕೆ ಮುಂದಾಗಿದ್ದಾರೆ.