ಕಂಪ್ಲಿ ಪುರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿದರು. ಪ್ರಭಾರ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಲೆಕ್ಕಿಗ ರಮೇಶ ಬೆಳಂಕರ, ಪ್ರಮುಖರಾದ ಜಿ.ಸುಧಾಕರ, ಬಿ.ಕೆ.ವಿರೂಪಾಕ್ಷಿ, ಎನ್.ಎಂ.ಪತ್ರಯ್ಯಸ್ವಾಮಿ, ಬಿ.ವೆಂಕಟೇಶ, ಬಿ.ಜಾಫರ್ ಇತರರಿದ್ದರು.
ಕಂಪ್ಲಿಯಲ್ಲಿ ಪೌರಕಾರ್ಮಿಕರ ಸಂಖ್ಯೆ ಹೆಚ್ಚಿಸಿ
ಕಂಪ್ಲಿ: ಪಟ್ಟಣ ದಿನೇದಿನೆ ಅಭಿವೃದ್ಧಿ ಹೊಂದುತ್ತಿದ್ದು, ಸ್ವಚ್ಛತೆಗಾಗಿ ಪೌರಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವಂತೆ ಪುರಸಭೆ ಮಾಜಿ ಅಧ್ಯಕ್ಷ ಭಟ್ಟ ಪ್ರಸಾದ್ ಹೇಳಿದರು.
ನಗರದ ಪುರಸಭೆ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸಾರ್ವಜನಿಕ ಮೂತ್ರಾಲಯ, ಶೌಚಗೃಹ ದುರಸ್ತಿಗೊಳಿಸಿ ಅಗತ್ಯ ಸೌಕರ್ಯ ಕಲ್ಪಿಸಬೇಕು. ಸ್ವಚ್ಛತೆ ಕಾಪಾಡಬೇಕು.
ಪಟ್ಟಣದ ವಿವಿಧೆಡೆ ಸಂಚಾರಿ ಶೌಚಗೃಹ ವ್ಯವಸ್ಥೆ ಕಲ್ಪಿಸಬೇಕು. ಅಕ್ಕಿಜಿಲಾನ್, ಕನಕದಾಸ ವೃತ್ತ ಬಳಿ ಕಾಲನಿಯಲ್ಲಿ ಸಿಸಿ ರಸ್ತೆ, ಚರಂಡಿ ವ್ಯವಸ್ಥೆ ಮಾಡಬೇಕು. ಮಾರೆಮ್ಮ ಗುಡಿ ಇಳಿಜಾರು ರಸ್ತೆ, ಸೊಸೈಟಿ ರಸ್ತೆ ಅಗಲೀಕರಿಸಿ ಅಭಿವೃದ್ಧಿ ಗೊಳಿಸಬೇಕು. ಬೀದಿನಾಯಿ ಉಪಟಳ ನಿಯಂತ್ರಿಸಬೇಕು. ಅಕ್ಕಿಗಿರಣಿಗಳಿಗೆ ಮೂಲಸೌಕರ್ಯ ಒದಗಿಸಬೇಕು. 15ನೇ ವಾರ್ಡ್‌ನಲ್ಲಿ ಉಳಿದ ಒಂದು ರಸ್ತೆ ಅಭಿವೃದ್ಧಿ ಗೊಳಿಸಬೇಕು.
ನದಿಗೆ ನೆರೆ ಬಂದಾಗ ಕೋಟೆಯ ರುದ್ರಭೂಮಿಗೆ ಪರ್ಯಾಯ ರಸ್ತೆ ಕಲ್ಪಿಸಬೇಕು. ಅನಕೃ ವೃತ್ತ ಪುನರ್ ನಿರ್ಮಿಸುವಂತೆ ವಿವಿಧ ಸೌಲಭ್ಯ ಕಲ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದರು.
ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಮಾತನಾಡಿ, ಹಂತ ಹಂತವಾಗಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು. 2025-26ನೇ ಸಾಲಿನ ಆಯವ್ಯಯದ ಅನುಪಾಲನೆ ಕುರಿತು ವರದಿ ನೀಡಿದರು.