District Fax Employees Welfare Development Union protests  
ಬಳ್ಳಾರಿ

ಬಡ್ಡಿ ಸಹಾಯಧನ ಮೊತ್ತ ಶೇ.3ಕ್ಕೆ ಹೆಚ್ಚಿಸಿ

ಅಶೋಕ್ ಕುಮಾರ್ ಎನ್
ಬಳ್ಳಾರಿ: ರೈತರಿಗೆ ಶೂನ್ಯ ಬಡ್ಡಿ ಧರದಲ್ಲಿ ವಿತರಿಸಿದ ಕೆಸಿಸಿ ಅಲ್ಪಾವಧಿ ಸಾಲ, ಪಶು, ಮೀನುಗಾರಿಕೆ ದುಡಿಯುವ ಬಂಡವಾಳ ಸಾಲದ ವಸೂಲಾತಿ ಆಧಾರದ ಮೇಲೆ ಸಹಕಾರ ಸಂಘಗಳಿಗೆ ನೀಡುವ ಬಡ್ಡಿ ಮಾರ್ಜಿನ್ ಮೊತ್ತವನ್ನು ಶೇ.1.75ರಿಂದ 3ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಜಿಲ್ಲಾ ಫ್ಯಾಕ್ಸ್ ನೌಕರರ ಕ್ಷೇಮಾಭಿವೃದ್ಧಿ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಗಡಿಗಿ ಚನ್ನಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ತಹಸೀಲ್ದಾರ್ ಸಂಗಮೇಶಗೆ ಮನವಿ ಸಲ್ಲಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಎಚ್.ಕರೇಗೌಡ ಮಾತನಾಡಿ, ಸಹಕಾರ ಸಂಘಗಳ ಮೂಲಕ ವಿತರಿಸುವ ಕೆಸಿಸಿ ಸಾಲಗಳಿಗೆ ಹಿಂದೆ ಶೇ.3 ಬಡ್ಡಿ ಮಾರ್ಜಿನ್ ನೀಡಲಾಗುತ್ತಿತ್ತು. ಸರ್ಕಾರವು ವರ್ಷದಿಂದ ವರ್ಷಕ್ಕೆ ಈ ಸಹಾಯಧನವನ್ನು ಕಡಿಮೆ ಮಾಡುತ್ತಾ ಬಂದಿದೆ. 2023-24 ರಲ್ಲಿ ಶೇ.2, ಈ ವರ್ಷ ಶೇ.1.75 ನಿಗದಿ ಮಾಡಿರುವುದು ಸರಿಯಲ್ಲ ಎಂದರು.

ಕೆಸಿಸಿ ಬೆಳೆಸಾಲ ವಿತರಣೆಯನ್ನು ಸ್ಕೀಲಾ ಫೈನಾನ್ಸ್ ನಿಯಮಾವಳಿಯಂತೆ ಕ್ರಮ ಕೈಗೊಳ್ಳಬೇಕು. ಪ್ರಾಕೃಪಸಸಂ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಕನಿಷ್ಠ ವೇತನ ಹಾಗೂ ಸೇವಾ ಸೌಲಭ್ಯ ಒದಗಿಸಬೇಕು. ಹಳೆಯದಾಗಿರುವ ಸಹಕಾರ ಸಂಘಗಳ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು. 2018ರ ಸಾಲಮನ್ನಾ ಯೋಜನೆ ಪಟ್ಟಿ ಸೇರಿದ ರೈತರಿಗೆ ಬಾಕಿ ಮನ್ನಾ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು. ಯಶಸ್ವಿನಿ ಯೋಜನೆಯಡಿ ಸಂಘಗಳಿಗೆ ನೀಡುವ ಪ್ರೋತ್ಸಾಹಧನವನ್ನು ಪ್ರತಿ ಕುಟುಂಬಕ್ಕೆ 100 ಕ್ಕೆ ನಿಗದಿಪಡಿಸಬೇಕು. ಕೆಸಿಸಿ ಸಾಲ ವಿತರಣೆಯನ್ನು ಸಂಪೂರ್ಣ ಆನ್‌ಲೈನ್ ವ್ಯವಸ್ಥೆ ಮೂಲಕ ಸರಳೀಕರಣಗೊಳಿಸಬೇಕು ಎಂದು ಒತ್ತಾಯಿಸಿದರು.
ಉಪಾಧ್ಯಕ್ಷ ದ್ಯಾಮಣ್ಣನವರ ಬಸವರಾಜ್, ಪ್ರಧಾನ ಕಾರ್ಯದರ್ಶಿ ಕಟ್ಟೆ ಎರ‌್ರಿಸ್ವಾಮಿ, ಖಜಾಂಚಿ ಪದ್ಮಶಾಲಿ ಆಂಜನೇಯ, ಕಾರ್ಯದರ್ಶಿ ಜಡೇಶರೆಡ್ಡಿ, ಸಿಇಒ ಮತ್ತು ಸಿಬ್ಬಂದಿ ಒಕ್ಕೂಟದ ಸಂಡೂರು ತಾಲೂಕು ಅಧ್ಯಕ್ಷ ಕೆ.ಶಿವಲಿಂಗಪ್ಪ, ಭುಜಂಗನಗರ ಜಂಬಣ್ಣ, ಡಿ.ಎಚ್.ನಿಂಗಪ್ಪ, ಹುಲಿಕುಂಟೆಪ್ಪ ಬಣಕಾರ್, ಮದ್ದೇಶ್ವರರಾವ್ ಮುಂತಾದವರಿದ್ದರು.