- ಎಫ್‌ಡಿಟಿ ಬಾಕಿ ಉಳಿಸಿಕೊಂಡ ಕಂಪನಿ
- ಕನ್ವೇಯರ್ ಬೆಲ್ಟ್ ನಿರ್ಮಾಣಕ್ಕೆ ಬಳಕೆ
ಬಳ್ಳಾರಿ : ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತವು (ಕೆಎಸ್‌ಎಂಸಿಎಲ್) ಸಂಡೂರು ತಾಲೂಕಿನಲ್ಲಿ 47 ಎಕರೆಗೂ ಹೆಚ್ಚು ಅರಣ್ಯ ಭೂಮಿಯನ್ನು ಗಣಿಗಾರಿಕೆ, (ಕನ್ವೇಯರ್ ಬೆಲ್ಟ್ ನಿರ್ಮಾಣ) ಹಾಗೂ ಇತರೆ ಉದ್ದೇಶಕ್ಕೆ ಬಳಸಿಕೊಳ್ಳಲು ಕೇಂದ್ರ ಪರಿಸರ, ಅರಣ್ಯ ಮತ್ತು ವಾತಾವರಣ ಬದಲಾವಣೆ ಸಚಿವಾಲಯದಿಂದ ತಾತ್ವಿಕ ಅನುಮೋದನೆ ಪಡೆದುಕೊಂಡಿದೆ.
ಆದರೆ, ಕಳೆದ ಕೆಲ ವರ್ಷಗಳಿಂದ ಅರಣ್ಯ ಅಭಿವೃದ್ಧಿ ತೆರಿಗೆ (ಎಫ್‌ಡಿಟಿ) ರೂಪದಲ್ಲಿ ಪಾವತಿಸಬೇಕಿದ್ದ ನೂರಾರು ಕೋಟಿ ರೂಪಾಯಿ ಬಾಕಿ ಹಣವನ್ನು ಸಂಸ್ಥೆಯು ಇನ್ನೂ ಪಾವತಿಸದಿರುವುದು ಅರಣ್ಯ ಇಲಾಖೆಯಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಸುಪ್ರೀಂ ಆದೇಶದ ಬೆನ್ನಲ್ಲೇ ಒಲಿದ ಅನುಮತಿ : ಸಂಸ್ಥೆಯು 1,536 ಎಕರೆ ಪ್ರದೇಶದಲ್ಲಿ ಹೊಂದಿರುವ ತನ್ನ ಕಬ್ಬಿಣದ ಅದಿರು ಗಣಿಯಿಂದ ಅದಿರು ಸಾಗಿಸಲು ಕನ್ವೇಯರ್ ಬೆಲ್ಟ್ ನಿರ್ಮಿಸಲು 2020ರಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ರಸ್ತೆ ಮೂಲಕ ಅದಿರು ಸಾಗಿಸುವುದು ತಪ್ಪಿಸಿ ಮಾಲಿನ್ಯ ಕಡಿಮೆ ಮಾಡಲು ಕನ್ವೇಯರ್ ಬೆಲ್ಟ್‌ಗಳು ಸಹಕಾರಿಯಾಗಿವೆ. ವರ್ಷಕ್ಕೆ 1 ಮಿಲಿಯನ್ ಟನ್‌ಗಿಂತ ಹೆಚ್ಚು ಅದಿರು ತೆಗೆಯುವ ಗಣಿ ಕಂಪನಿಗಳು ಮಾಲಿನ್ಯ ತಡೆಯಲು ಕನ್ವೇಯರ್ ಬೆಲ್ಟ್ ಬಳಸಲೇಬೇಕು ಎಂಬ ಸುಪ್ರೀಂ ಕೋರ್ಟ್‌ನ ಕಡ್ಡಾಯ ಆದೇಶವು ಕೆಎಸ್‌ಎಂಸಿಎಲ್‌ಗೆ ವರವಾಗಿದೆ. ಎಫ್‌ಡಿಟಿ ಬಾಕಿ ಪಾವತಿಸದೇ ಇದ್ದರೂ ಈ ಸುಪ್ರೀಂ ಆದೇಶದ ಆಧಾರದ ಮೇಲೆ ಕೇಂದ್ರದಿಂದ ಅನುಮತಿ ಪಡೆಯಲು ಕಂಪನಿಗೆ ಸಾಧ್ಯವಾಗಿದೆ.
135 ಕೋಟಿ ರೂ. ಬಾಕಿ : ಅರಣ್ಯ ಇಲಾಖೆಯು ಸುಮಾರು ಕೆಲ ವರ್ಷಗಳ ಹಿಂದೆ ನಡೆಸಿದ್ದ ಲೆಕ್ಕಾಚಾರದ ಪ್ರಕಾರ 2000-2008 ಮತ್ತು 2008-2013ರ ಅವಧಿಯ ಗಣಿಗಾರಿಕೆ ಹಾಗೂ ರಫ್ತಿಗೆ ಸಂಬಂಧಿಸಿದಂತೆ ಕೆಎಸ್‌ಎಂಸಿಎಲ್ ಸಂಸ್ಥೆಯು ಚಾಲ್ತಿ ದರಗಳ ಆಧಾರದಲ್ಲಿ 350.61 ಕೋಟಿ ರೂ. ಎಫ್‌ಡಿಟಿ ಬಾಕಿ ಉಳಿಸಿಕೊಂಡಿತ್ತು. ಆದರೆ, ಸರ್ಕಾರದ ನಿರ್ದೇಶನದಂತೆ ಕಂಪನಿ ಸಲ್ಲಿಸಿದ ಇನ್‌ವಾಯ್ಸ ಆಧರಿಸಿ ಜಂಟಿ ಪರಿಶೀಲಿಸಿದ ನಂತರ ಬಾಕಿ ಮೊತ್ತವನ್ನು 135.94 ಕೋಟಿ ರೂ. ಗೆ ಇಳಿಸಲಾಯಿತು. ಆದಾಗ್ಯೂ, ಈ ಮೊತ್ತ ಸಂಸ್ಥೆ ಇಂದಿಗೂ ಪಾವತಿಸಿಲ್ಲ.
ಕೋರ್ಟ್ ಮೊರೆ : ಪದೇ ಪದೇ ನೋಟಿಸ್ ನೀಡಿದರೂ ಕಂಪನಿಯು ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿತ್ತು. ಆದರೆ, ಕರ್ನಾಟಕ ಹೈಕೋರ್ಟ್‌ನಿಂದ ಕಂಪನಿಯು ತಡೆಯಾಜ್ಞೆ ತಂದಿರುವುದು ಸರ್ಕಾರಕ್ಕೆ ಹಿನ್ನಡೆಯಾಗಿದೆ. ಇದೀಗ ಅರಣ್ಯ ಇಲಾಖೆಯು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಹಣವನ್ನು ಅರಣ್ಯದ ಅಭಿವೃದ್ಧಿ ಮತ್ತು ಮರುಪೂರಣಕ್ಕಾಗಿ ಬಳಸಬೇಕಿದೆ. ಯೋಜನೆಗೆ ಅನುಮತಿ ಪಡೆಯುವ ಮುನ್ನವೇ ಬಾಕಿ ತೀರಿಸುವಂತೆ ತಿಳಿಸಲಾಗಿತ್ತು. ಇತ್ತೀಚೆಗೆ ಕೇಂದ್ರದಿಂದ ತಾತ್ವಿಕ ಅನುಮೋದನೆ ಸಿಕ್ಕಿದ್ದರೂ, ಕಂಪನಿಯು ಮುಂದಿನ ದಿನಗಳಲ್ಲಿ ಗಣಿ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಿದಾಗ ಈ ಎಫ್‌ಡಿಟಿ ಬಾಕಿ ವಿಚಾರವನ್ನು ಗಂಭೀರವಾಗಿ ಕೈಗೆತ್ತಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿದವು. ಈ ಹಿಂದೆ ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್) ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಈ ಸರ್ಕಾರಿ ಸ್ವಾಮ್ಯದ ಸಂಸ್ಥೆಯು ದಾಖಲೆಗಳ ಅಕ್ರಮ ಮತ್ತು ವಂಚನೆ ಆರೋಪ ಎದುರಿಸಿತ್ತು. 2018ರಲ್ಲೇ ಕಂಪನಿಯು ದಾಖಲೆ ವಂಚನೆ ಒಪ್ಪಿಕೊಂಡಿದ್ದರೂ ಸೂಕ್ತ ತನಿಖೆ ನಡೆದಿಲ್ಲ ಎಂಬುದಾಗಿ ಪರಿಸರ ಪ್ರೇಮಿಗಳ ವಾದವಾಗಿದೆ.
"
ಕೋಟ್... ಅರಣ್ಯ ಇಲಾಖೆಯು ಕಂಪನಿಯ ಬಾಕಿ ಪಾವತಿಗಾಗಿ ತಡೆಯಾಜ್ಞೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿದೆ.ಡಾ.ಕೆ.ಎನ್.ಬಸವರಾಜ್, ಡಿಸಿಎಫ್, ಬಳ್ಳಾರಿ.