ಕಂಪ್ಲಿಯಲ್ಲಿ ಕಸಾಪ ತಾಲೂಕು ಘಟಕದಿಂದ ಆಯೋಜಿಸಿದ್ದ ಕಸಾಪ 112ನೇ ಸಂಸ್ಥಾಪನಾ ದಿನಾಚರಣೆಗೆ ಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗದ ಕಾರ್ಯದರ್ಶಿ ಡಾ.ಜಂಬುನಾಥಗೌಡ ಚಾಲನೆ ನೀಡಿದರು.
ಕಂಪ್ಲಿ: ಕನ್ನಡ ನಾಡಿನ ಭಾಷೆ, ಸಾಹಿತ್ಯ, ಸಂಸ್ಕೃತಿ, ಗಡಿ ಮತ್ತು ಕನ್ನಡಪರ ಸಂಸ್ಕೃತಿಯ ಬೆಳವಣಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಮುಖ ಪಾತ್ರ ವಹಿಸಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕದಿಂದ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು. ರಾಜ್ಯದಲ್ಲಿ ಕಸಾಪ ನಿರಂತರ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡಿಗರಲ್ಲಿ ಸಾಹಿತ್ಯಾಭಿಮಾನ ಕಳೆಗಟ್ಟುವಂತೆ ಮಾಡಿದೆ ಎಂದರು.
ಅತಿಥಿ ಉಪನ್ಯಾಸಕ ಆರ್.ರುದ್ರಮುನಿ ಕನ್ನಡ ಸಾಹಿತ್ಯ ಪರಿಷತ್ತು ಬೆಳೆದು ಬಂದ ದಾರಿ ಕುರಿತು ಉಪನ್ಯಾಸ ನೀಡಿ, ಸಾರಸ್ವತ ಲೋಕಕ್ಕೆ ಕಸಾಪ ಮಹತ್ವದ ಕೊಡುಗೆ ನೀಡಿದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸುವಲ್ಲಿ ಕಸಾಪ ಪಾತ್ರ ಮರೆಯುವಂತಿಲ್ಲ ಎಂದರು.
ನಾನಾ ಕ್ಷೇತ್ರಗಳ ಸಾಧಕರಾದ ಡಾ.ಜಂಬುನಾಥಗೌಡ, ಡಾ.ಕೃಷ್ಣಕುಮಾರ್, ಡಿ.ವಿ.ಸತ್ಯನಾರಾಯಣ, ಪ್ರೊ.ರತನ ಚವ್ಹಾಣ್, ಕೃಷ್ಣ ಎಸ್.ಪೋಳ, ಸಿ.ರುದ್ರಪ್ಪ, ಶಂಕರ ಉಬಾಳೆ, ಚಂದ್ರಶೇಖರಗೌಡ, ಎಲಿಗಾರ ವೆಂಕಟರೆಡ್ಡಿ, ಡಾ.ಹಾದಿಮನಿ ಕಾಳಿಂಗವರ್ಧನ, ಎಸ್.ಡಿ.ಬಸವರಾಜ, ಪರಶುರಾಮ ಬುಸಾರೆ, ಕೊರವರ ಗೋಪಾಲರನ್ನು ಗೌರವಿಸಲಾಯಿತು.
ಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗದ ಕಾರ್ಯದರ್ಶಿ ಡಾ.ಜಂಬುನಾಥಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಬಿ.ಶ್ರೀನಿವಾಸರೆಡ್ಡಿ, ಕಸಾಪ ಪದಾಧಿಕಾರಿಗಳಾದ ಅಂಬಿಗರ ಮಂಜುನಾಥ, ಎಸ್.ಡಿ.ಬಸವರಾಜ, ಎಸ್.ಶಾಮಸುಂದರರಾವ್, ಯು.ಎಂ.ವಿದ್ಯಾಶಂಕರ, ಅಶೋಕ ಕುಕನೂರು, ಎಸ್.ರಾಮಪ್ಪ, ಡಾ.ಅನ್ನಪೂರ್ಣ ಗುಡದೂರು ಇತರರಿದ್ದರು.