ಸಂಡೂರು ತಾಲೂಕು ತೋರಣಗಲ್‌ನಲ್ಲಿ ಸಿಪಿಐ(ಎಂ) ನಿಂದ ಮಹಾತ್ಮ ಗಾಂಧಿ ಹುತಾತ್ಮ ದಿನ ಆಚರಿಸಲಾಯಿತು.  
ಬಳ್ಳಾರಿ

ಆಲೋಚನೆ-ಆಚರಣೆಗೆ ವಿರುದ್ಧವಾದ ನೀತಿ ಜಾರಿ

ಅಶೋಕ್ ಕುಮಾರ್ ಎನ್
ಸಂಡೂರು: ದ್ವೇಷವನ್ನು ಪ್ರೀತಿಯಿಂದ ಹಾಗೂ ಅಸತ್ಯವನ್ನು ಸತ್ಯದಿಂದ ಗೆಲ್ಲಬೇಕು ಎಂಬುದನ್ನು ಮಹಾತ್ಮ ಗಾಂಧಿ ದೃಢವಾಗಿ ನಂಬಿದ್ದರು ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ.ಎಮ್.ಚನ್ನಬಸಯ್ಯ ಹೇಳಿದರು.
ತೋರಣಗಲ್ ಸ್ಟೇಷನ್ ಮಹಾಂಕಾಳಿ ಗುಡಿ ಬಳಿ ಸಿಪಿಐ(ಎಂ)ನಿಂದ ಆಯೋಜಿಸಿದ್ದ ಹುತಾತ್ಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾತ್ಮ ಗಾಂಧಿ ಮೇಲಿನ ದಾಳಿ ಮುಂದುವರಿದಿದ್ದು, ದೇಶದ 12 ಕೋಟಿ ಗ್ರಾಮೀಣ ಪ್ರದೇಶದ ಕೂಲಿಕಾರರ ಜೀವನ ಆಧಾರವಾಗಿದ್ದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಲಗೊಳಿಸಿ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಕಾಯ್ದೆ ವಿರೋಧಿಸಿ ಒಂದು ವಾರದಿಂದ ದೇಶಾದ್ಯಂತ ಅಭಿಯಾನ ಆರಂಭಿಸಲಾಗಿದೆ ಎಂದರು.
ಮಹಾತ್ಮ ಗಾಂಧಿ ಅವರ ಅಹಿಂಸಾ ಚಳವಳಿ ಪರಂಪರೆ ಮೂಲಕ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಮಹಾತ್ಮ ಗಾಂಧಿ ಹೆಸರನ್ನು ತೆಗೆದು ಹಾಕಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು. ಸರ್ಕಾರಗಳು ಗಾಂಧಿ ಅವರ ಆಲೋಚನೆಗಳು, ಆಚರಣೆಗಳಿಗೆ ವಿರುದ್ಧವಾದ ಉದಾರೀಕರಣ, ಖಾಸಗೀಕರಣ ನೀತಿಗಳನ್ನು ಖಂಡಿಸಬೇಕು ಎಂದು ತಿಳಿಸಿದರು.