ನಿಟ್ಟೂರು ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಸುಧಾ ಬಾರ್ಕಿ, ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಯೋಜನಾಧಿಕಾರಿ ಸುಬ್ರಹ್ಮಣಿ ಡಿ., ಮೇಲ್ವಿಚಾರಕ ಮಂಜುನಾಥ, ಪ್ರಮುಖರಾದ ಎಸ್.ಪಿ.ಲಿಂಬ್ಯಾನಾಯ್ಕ, ವೀರಭದ್ರಯ್ಯ ಶಾಸ್ತ್ರಿ, ಬಸವರಾಜ ಪಟ್ಟಣಶೆಟ್ಟಿ, ಮಂಜಪ್ಪ ಕಡತಿ ಇತರರಿದ್ದರು.
ಹರಪನಹಳ್ಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಯಾವುದೇ ದಾಖಲಾತಿಗಳಿಲ್ಲದೆ ಗುಂಪು ಭದ್ರತೆ ಆಧಾರದ ಮೇಲೆ ಕನಿಷ್ಠ ಬಡ್ಡಿದರದಲ್ಲಿ ಸಾಲ ಒದಗಿಸಲಾಗುತ್ತಿದೆ ಎಂದು ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗುರುವಾರ ಆಯೋಜಿಸಿದ್ದ ಸಹಸ್ರ ಬಿಲ್ವಾರ್ಚನೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಕೆಳ ವರ್ಗದ ಮಹಿಳೆಯರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮುನ್ನೆಲೆಗೆ ತರಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸಾಕಷ್ಟು ಪರಿಶ್ರಮ ಪಟ್ಟಿದೆ. ಧಾರ್ಮಿಕ ಆಚರಣೆ, ಮದ್ಯವರ್ಜನ ಶಿಬಿರ, ಕೆರೆ ಅಭಿವೃದ್ಧಿ ಸೇರಿದಂತೆ ಅನೇಕ ಜನಪರ ಯೋಜನೆಗಳ ಮೂಲಕ ತನ್ನ ಛಾಪು ಮೂಡಿಸಿದೆ ಎಂದರು.
ಯೋಜನೆ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ, ನಿರ್ಗತಿಕರಿಗೆ ಮಾಸಾಶನ, ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಸಹಾಯಧನ, ಮಾರಾಣಾಂತಿಕ ಕಾಯಿಲೆಗಳಿಗೆ ಕ್ರಿಟಿಕಲ್ ಫಂಡ್, ಆರೋಗ್ಯ ರಕ್ಷಾ ಮತ್ತು ಸಂಪೂರ್ಣ ಸುರಕ್ಷಾ ವಿಮೆ, ದೇವಸ್ಥಾನಗಳ ಜೀರ್ಣೊದ್ಧಾರಕ್ಕಾಗಿ ಅನುದಾನ ಸೇರಿದಂತೆ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪರವಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಸಂಘ ಮಾಡುತ್ತಿದೆ ಎಂದರು.