- ಅದಿರು ಸಾಗಣೆ ಮಾಡಿ ನಿಯಮ ಉಲ್ಲಂಘಿಸಿದೆ
- ಅಪಘಾತಗಳು ಗ್ರಾಮಸ್ಥರಲ್ಲಿ ಆರೋಗ್ಯ ಸಮಸ್ಯೆ
ಬಳ್ಳಾರಿ : ಕೇಂದ್ರ ಸರ್ಕಾರ ಸ್ವಾಮ್ಯದ ಎನ್‌ಎಂಡಿಸಿ ಮೈನಿಂಗ್ ಕಂಪನಿಯೂ ನಿಯಮ ಬಾಹಿರವಾಗಿ ಅದಿರು ಸಾಗಣೆ ಮಾಡುತ್ತಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್.ಹಿರೇಮಠ ಆರೋಪಿಸಿದರು. ನಗರದ ಪತ್ರಿಕಾಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಲಾರಿಗಳ ಮೂಲಕ ಮೈನಿಂಗ್ ಪ್ರದೇಶದಿಂದ ಅದಿರು ಸಾಗಾಟ ಮಾಡಬಾರದು ಎಂಬ ನಿಯಮವಿದ್ದರೂ, ಕಂಪನಿ ಮಾತ್ರ ಲಾರಿಗಳ ಮೂಲಕವೇ ಅದಿರು ಸಾಗಣೆ ಮಾಡಿ ನಿಯಮ ಉಲ್ಲಂಘಿಸಿದೆ. ಕಳೆದ ಕೆಲ ವರ್ಷಗಳಿಂದ ಎನ್‌ಎಂಡಿಸಿ ಕಂಪನಿಯೂ ಕನ್ವೇಯರ್ ಬೆಲ್ಟ್ ಮೂಲಕ ಕಾರ್ಯ ನಿರ್ವಹಿಸುತ್ತಿಲ್ಲ.
ಇದರಿಂದ ಲಾರಿಗಳು ಅದಿರು ಹೊತ್ತು ಸಂಡೂರು ತಾಲೂಕಿನ ರಣಜಿತ್ ಪುರ, ನರಸಿಂಗಪುರ ಹಾಗೂ ಸುಬ್ಬರಾಯನಹಳ್ಳಿ ಹಳ್ಳಿಗಳಿಂದ ಸಂಚರಿಸುವುದರಿಂದ ಅಪಘಾತಗಳು ಹೆಚ್ಚುವ ಜತೆಗೆ ಗ್ರಾಮಸ್ಥರಲ್ಲಿ ಆರೋಗ್ಯ ಸಮಸ್ಯೆಗಳು ದಿನೇದಿನೆ ಹೆಚ್ಚುತ್ತಿದೆ ಎಂದು ಅಕ್ರೋಶ ಹೊರಹಾಕಿದರು. 2021ರಲ್ಲಿ ಪರಿಸರ ಅನುಸರಣೆ ವರದಿಯಲ್ಲಿ ಕಬ್ಬಿಣದ ಅದಿರು ಸಾಗಣೆಗೆ ಪ್ರತ್ಯೇಕ ಕನ್ವೇಯರ್ ಬೆಲ್ಟ್ ವ್ಯವಸ್ಥೆಯಿದೆ ಎಂಬುದಾಗಿ ಪತ್ರದ ಮೂಲಕ ತಿಳಿಸಿತ್ತು. ಆದರೆ, ವಾಸ್ತವದಲ್ಲಿ ಕನ್ವೇಯರ್ ಬೆಲ್ಟ್ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ ಈ ವಿಷಯವನ್ನು ಕೇಂದ್ರ ಉನ್ನತಾಧಿಕಾರ ಸಮಿತಿ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.
ವಾಸ್ತವಾಂಶವನ್ನು ಉದ್ದೇಶಪೂರ್ವಕವಾಗಿ ಮರೆಮಾಚಿರುವುದು, ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸಿರುವುದು ಹಾಗೂ ಗ್ರಾಮಸ್ಥರನ್ನು ನಿರಂತರ ಅಪಾಯಕ್ಕೆ ದೂಡುತ್ತಿರುವ ಹಿನ್ನೆಲೆ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು. ಎನ್‌ಎಂಡಿಸಿ ಸಂಸ್ಥೆಯು 2021 ರಲ್ಲಿ ಸಲ್ಲಿಸಿರುವ ಪರಿಸರ ಅನುಸರಣೆ ವರದಿಯಲ್ಲಿ ತಪ್ಪು ಮಾಹಿತಿ ನೀಡಿದೆ. ಆದ್ದರಿಂದ, ಕುಡತಿನಿ ಬಳಿಯ ವೇಮನ ಪೀಠದಲ್ಲಿ ಜೂ.5ರಂದು ಗಣಿಬಾಧಿತ ಪ್ರದೇಶ ಜನರು ಹಾಗೂ ಪ್ರಮುಖ ಹೋರಾಟಗಾರರ ಜತೆ ಹೋರಾಟದ ರೂಪುರೇಷೆಗಳ ಚರ್ಚಿಸಲು ಸಭೆ ಕರೆಯಲಾಗಿದೆ ಎಂದರು.