ಬಳ್ಳಾರಿ : ಪಾಲಿಕೆಯ ಸಾಮಾನ್ಯ ಸಭೆಗಳು ನಡೆಯದೆ ಅಭಿವೃದ್ಧಿ ಕುಂಠಿತವಾಗಿದ್ದರೆ, ಇನ್ನೊಂದೆಡೆ ಸಾರ್ವಜನಿಕ ಆಸ್ತಿಯಾದ ಸ್ಮಶಾನದ ಜಾಗವನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ಖಾತೆ ಬದಲಾವಣೆ ಮಾಡಲಾಗುತ್ತಿದೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಶ್ರೀನಿವಾಸ್ ಮೋತ್ಕರ್ ಆರೋಪಿಸಿದರು.
ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಬೆಂಗಳೂರು ರಸ್ತೆಯ ಸರ್ವೆ ನಂಬರ್ 564/ಎ ಮತ್ತು 564/ಬಿ ಟಿಎಸ್ ನಂ. 650 ರಲ್ಲಿರುವ ಸುಮಾರು 11.5 ಎಕರೆ ವಿಸ್ತೀರ್ಣದ ಸ್ಮಶಾನದ (ಕಬ್ರಸ್ತಾನ್) ಜಾಗವನ್ನು ಅಧಿಕಾರಿಗಳು ಶಾಮೀಲಾಗಿ ಎ. ಪಾರ್ವತಿ ಎಂಬುವವರ ಅಕ್ರಮವಾಗಿ ಖಾತೆಗೆ ವರ್ಗಾಯಿಸಿದ್ದಾರೆ. ವಲಯ-2 ರ ಆರ್‌ಐ ನರಸಿಂಹಯ್ಯ, ಎಆರ್‌ಒ ವೆಂಕಟೇಶ್ ಹಾಗೂ ವಲಯ-3 ರ ಆರ್‌ಐ ಲಕ್ಷೀ ನಾರಾಯಣ್ ಮತ್ತು ಡೆಪ್ಯುಟಿ ಕಮಿಷನರ್ (ರೆವೆನ್ಯೂ) ನಂದೀಶ್ ಅವರು ಈ ಅಕ್ರಮ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಆಸ್ತಿಯ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್ ವಿವರಗಳಿಲ್ಲ ಹಾಗೂ ವಿಳಾಸವನ್ನು ಕೇವಲ ಬೆಂಗಳೂರು ರಸ್ತೆ ಎಂದು ನಮೂದಿಸಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ದೂರಿದರು.
ನಿಯಮದ ಪ್ರಕಾರ ಪ್ರತಿ ತಿಂಗಳು ನಡೆಯಬೇಕಿದ್ದ ಪಾಲಿಕೆಯ ಸಾಮಾನ್ಯ ಸಭೆಯು ಕಳೆದ 9 ತಿಂಗಳಿನಿಂದ ನಡೆದಿಲ್ಲ. ಜ.16 ರಂದು ನಿಗದಿಯಾಗಿದ್ದ ಸಭೆಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ರದ್ದುಗೊಳಿಸಲಾಗಿದೆ ಎಂದರು.
ಬಿಜೆಪಿ ನಗರ ಘಟಕದ ಅ್ಯಕ್ಷ ಜಿ. ವೆಂಕಟರಮಣ ಮಾತನಾಡಿ, ಪಾಲಿಕೆಯು ಶಾಸಕ ಭರತ್‌ರೆಡ್ಡಿ ಅವರ ಹಂಗಿನಲ್ಲಿದ್ದು, ಆಡಳಿತ ಸಂಪೂರ್ಣ ಕುಸಿದಿದೆ. ಪಾಲಿಕೆ ಕಮಿಷರ್ ಅವರು ಶಾಸಕರ ಗುಲಾಮರಂತೆ ವರ್ತಿಸುತ್ತಿದ್ದಾರೆ. ಜ.1ರಂದು ನಗರದಾದ್ಯಂತ ಅಕ್ರಮವಾಗಿ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದಾಗ, ಬ್ಯಾನರ್‌ಗಳಿಗೆ ಯಾವುದೇ ಶುಲ್ಕ ಸಂದಾಯವಾಗಿಲ್ಲ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ. ಇದರಿಂದ ಪಾಲಿಕೆಯ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ದೂರಿದರು. ಪಾಲಿಕೆ ಸದಸ್ಯರಾದ ಅಶೋಕ್, ಸುರೇಖಾ ಮಲ್ಲನಗೌಡ, ತಿಲಕ್ ಕುಮಾರ್, ಹನುಮಂತಪ್ಪ, ಗುಡಿಗಂಟಿ ಹನುಮಂತಪ್ಪ, ಕಲ್ಪನಾ ಇದ್ದರು.