ಅಲಗಿಲವಾಡ ಕ್ರಾಸ್ ಬಳಿ ಸೋಮವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿದರು. ಎಸಿ ಟಿ.ಸುರೇಶ್ ಕುಮಾರ್, ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬು, ಎಸಿಎಫ್ ಡಿ.ಬಾಸ್ಕರ್, ಅರಣ್ಯ ವಲಯಾಧಿಕಾರಿ ರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ರೈತ ಮುಖಂಡರಾದ ಬಿ.ವಿ.ಗೌಡ, ಶೇಖರ್ ನಾಯ್ಕ, ವಿಶ್ವನಾಥ ಸಿರಗನಹಳ್ಳಿ ಇತರರಿದ್ದರು.
- ಕೋಡಿಹಳ್ಳಿ ಚಂದ್ರಶೇಖರ ಎಚ್ಚರಿಕೆ
- ಉದ್ಯಮಿಗಳಿಗೆ ಮಣೆ, ರೈತರಿಗೆ ಶಿಕ್ಷೆ
ಹರಪನಹಳ್ಳಿ : ಅರಣ್ಯ ಭೂಮಿಯನ್ನು ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡಿರುವ ಸಣ್ಣ ರೈತರನ್ನು ಒಕ್ಕಲೆಬ್ಬಿಸಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಎಚ್ಚರಿಕೆ ನೀಡಿದರು.
ತಾಲೂಕಿನ ಅಲಗಿಲವಾಡ ಕ್ರಾಸ್ ಬಳಿ ಸೋಮವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಅವರೇ ಅರಣ್ಯ ಭೂಮಿ ಉಳುಮೆದಾರರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದಿದ್ದಾರೆ. ಆದರೂ ರಾಜ್ಯಾದ್ಯಂತ ಭೂಮಿ ಕಸಿವ ಕೆಲಸ ನಡೆಯುತ್ತಿದೆ. ಸಣ್ಣ ರೈತರ ಮೇಲೆ ದೌರ್ಜನ್ಯ ಎಸಗುವುದು ಅಕ್ಷಮ್ಯ. ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದಾಗ ಗ್ರಾಮ ಅರಣ್ಯ ಸಮಿತಿ ರಚಿಸಿ 227 ರೈತರ ಭೂಮಿ ಕಾಯಂಗೊಳಿಸಿದ್ದರು.
ಆದರೆ ಈಗ ಉದ್ಯಮಿಗಳ ಪ್ರಭಾವಕ್ಕೆ ಒಳಗಾಗಿ ಸಾವಿರಾರು ಎಕರೆ ಸಾರ್ವಜನಿಕ ಭೂಮಿಯನ್ನು ಕಂಪನಿಗಳಿಗೆ ಅಕ್ರಮವಾಗಿ ನೀಡಲಾಗಿದೆ. ಬಳ್ಳಾರಿ-ಹೊಸಪೇಟೆ ಮಧ್ಯ ಬಿಳಿ ಕೆರೆ ಬಂದರ್‌ನಲ್ಲಿ ಖಾಸಗಿ ಕಂಪನಿಗೆ ಲಕ್ಷಾಂತರ ಟನ್ ಮೈನಿಂಗ್ ಶೇಖರಣೆಗೆ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ಕೊಡಲಾಗಿದೆ. ಆದರೆ ಕಂಡೀಕೆರೆ ತಾಂಡಾ, ಕಡತಿ, ವಟ್ಲಹಳ್ಳಿ ಭಾಗದ ರೈತರು ಜೀವನಕ್ಕೆ ಉಳುಮೆ ಮಾಡಿದರೆ ಅವರನ್ನು ಒಕ್ಕಲೆಬ್ಬಿಸುತ್ತೀರಿ. ಹಗಲು ದರೋಡೆ ಮಾಡುವ ಉದ್ಯಮಿಗಳ ಮೇಲೆ ಏಕೆ ಕ್ರಮ ಇಲ್ಲ ಎಂದು ಪ್ರಶ್ನಿಸಿದರು.
"
ಅಲಗಿಲವಾಡ ಕಾಯ್ದಿಟ್ಟ ಅರಣ್ಯ ಭೂಪ್ರದೇಶ 130 ವರ್ಷಗಳ ಹಿಂದೆಯೇ ಸರ್ಕಾರದ ಅಧೀನಕ್ಕೆ ಬಂದಿದೆ. 1965ರಲ್ಲಿ ಕೃಷಿಗೆಂದು 500 ಎಕರೆ ನೀಡಲಾಗಿತ್ತು. ಅಲ್ಲಿ ನಮ್ಮ ಹಸ್ತಕ್ಷೇಪವಿಲ್ಲ. ಇಲಾಖೆ ವ್ಯಾಪ್ತಿ ಅತಿಕ್ರಮಿಸಿದವರನ್ನು ಮಾತ್ರ ತೆರವುಗೊಳಿಸುತ್ತಿದ್ದೇವೆ. ಜೀವ ಸಂಕುಲಗಳ ಉಳಿವಿಗೆ ಅರಣ್ಯ ಸಂರಕ್ಷಣೆ ಅಗತ್ಯ.
— ಅನುಪಮಾ ಡಿಎಫ್‌ಒ