ಬಳ್ಳಾರಿಯಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಮೇಯರ್ ಪಿ.ಗಾದೆಪ್ಪ ಉದ್ಘಾಟಿಸಿದರು. ರೆಡ್ಡಿ ಜನಸಂಘದ ಜಿಲ್ಲಾಧ್ಯಕ್ಷ ಎನ್.ಪ್ರತಾಪ್‌ರೆಡ್ಡಿ, ತಹಸೀಲ್ದಾರ್ ಶಾಷಾವಲಿ, ಜಿಲ್ಲಾ ಸರ್ಜನ್ ಡಾ.ಎನ್.ಬಸರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಇತರರಿದ್ದರು.
ಬಳ್ಳಾರಿ : ಮಹನೀಯರ ಆದರ್ಶಗಳನ್ನು ಪಾಲಿಸಿ, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆದಾಗ ಮಾತ್ರ ಮಹನೀಯರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹನೀಯರ ಆದರ್ಶ ಬದುಕು, ಅವರ ತತ್ವಗಳನ್ನು ಈಗಿನ ಯುವಜನತೆಗೆ ತಲುಪಿಸಲು ಮತ್ತು ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಮೂಡಿಸುವಲ್ಲಿ ರಾಜ್ಯ ಸರ್ಕಾರವು ಜಯಂತಿ ಕಾರ್ಯಕ್ರಮಗಳನ್ನು ಆಚರಿಸುತ್ತಿದೆ ಎಂದರು.
ಮಲಪನಗುಡಿಯ ಸ.ಪ್ರಾ. ಶಾಲಾ ಮುಖ್ಯಗುರು ಶೇಖರಗಿರಡ್ಡಿ ಮಾತನಾಡಿ, ನಾಡಿನ ತುಂಬೆಲ್ಲ ಸಂಚರಿಸಿ, ಲೋಕಜ್ಞಾನವನ್ನು ಹರಡುವ ಮೂಲಕ ತಮ್ಮ ಸಾಧನೆಯಿಂದ ಮಹಾಯೋಗಿಯಾಗುತ್ತಾರೆ. ಯೌವ್ವನದ ಆರಂಭದ ದಿನಗಳಲ್ಲಿ ಸ್ವೇಚ್ಛಾಜೀವನ ನಡೆಸುತ್ತಿದ್ದ ವೇಮನರು ಜ್ಞಾನೋದಯ ಪಡೆದು ದಾರ್ಶನಿಕ ಕವಿ, ಅನುಭವಿಯಾಗಿ ರೂಪುಗೊಂಡರು ಎಂದು ತಿಳಿಸಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂವಿಧಾನ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಜಯಂತಿ ಅಂಗವಾಗಿ ನಡೆದ ಮೆರವಣಿಗೆಯು ರೆಡ್ಡಿ ಜನ ಸಂಘ ಆವರಣದಿಂದ ಆರಂಭಗೊಂಡು ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ನಡೆಯಿತು.