- ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ
- ಮೋದಿ ಅವರು ಜಗತ್ತೇ ಮೆಚ್ಚಿದ ನಾಯಕ
ಬಳ್ಳಾರಿ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗಂಗಾವತಿಯಿಂದಲೇ ಸ್ಪರ್ಧಿಸುವೆ, ಕ್ಷೇತ್ರ ಬಿಡುವ ಪ್ರಶ್ನೆಯಿಲ್ಲ. ಆದರೆ, ನಾನು ಎಲ್ಲಿ ಸ್ಪರ್ಧಿಸಬೇಕು ಎಂಬುದು ಅಂತಿಮವಾಗಿ ಪಕ್ಷವೇ ತೀರ್ಮಾನ ಮಾಡಲಿದೆ ಎಂದು ಶಾಸಕ ಜಿ.ಜನಾರ್ದನರೆಡ್ಡಿ ಹೇಳಿದರು.
ನಗರದ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ದೇಶದಲ್ಲಿ ಕ್ಷೇತ್ರ ಮರುವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಜಾರಿ ಆಧಾರದ ಮೇಲೆಯೇ ನಗರ ಕ್ಷೇತ್ರದಿಂದ ಪತ್ನಿ ಅರುಣಾ ಲಕ್ಷ್ಮೀ ಸ್ಪರ್ಧಿಸುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ನಮ್ಮ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅರುಣಾ ಲಕ್ಷ್ಮೀ ಮತ್ತು ನನ್ನ ಸಹೋದರ ಸೋಮಶೇಖರ್ ರೆಡ್ಡಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎಂದು ಗೊಂದಲಗಳಿಗೆ ತೆರೆ ಎಳೆದರು.
ನನ್ನ ಮೇಲಿದ್ದ ಅಕ್ರಮ ಗಣಿಗಾರಿಕೆಯ ಬಹುತೇಕ ಪ್ರಕರಣಗಳು ಕೋರ್ಟ್‌ಗಳಲ್ಲಿ ಖುಲಾಸೆಯಾಗಿವೆ. ಇನ್ನು ಕೇವಲ ಒಂದೆರಡು ಕೇಸ್‌ಗಳು ಮಾತ್ರ ಬಾಕಿಯಿವೆ. ದೇಶದಲ್ಲಿ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಷನ್) ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ. ಟಿಎಂಸಿ ಸಂಸದರ ಬೆಂಬಲದ ಬಳಿಕ ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ. ಇಂಡಿಯಾ ಒಕ್ಕೂಟದಿಂದ ಹೊರಬಂದು ಇನ್ನೂ ಹಲವರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ದೇಶದ ಮಕ್ಕಳಿಗೆ ಕೇವಲ ಚಾಕಲೇಟ್ ಕೊಡಲು ಮಾತ್ರ ಲಾಯಕ್ಕು. ಆದರೆ, ನರೇಂದ್ರ ಮೋದಿ ಅವರು ಜಗತ್ತೇ ಮೆಚ್ಚಿದ ನಾಯಕ. ಕೆಲ ಜೋಕರ್‌ಗಳ ಮಾತಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು. ಇನ್ನು ದೇಶದಲ್ಲಿ ಬೆಲೆ ಏರಿಕೆಗೆ ಜಾಗತಿಕ ಯುದ್ಧಗಳೇ ಕಾರಣ, ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬೆಲೆ ಏರಿಕೆ ನಿಯಂತ್ರಣದಲ್ಲಿದೆ ಎಂದು ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ನೂತನ ಸಿಎಂ ಡಿ.ಕೆ.ಶಿವಕುಮಾರ್ ಅವರು ಒಳ್ಳೆಯ ಆಡಳಿತ ನೀಡಲಿ. ಆದರೆ, ಸರ್ಕಾರದಲ್ಲಿರುವ ಗೊಂದಲಗಳನ್ನು ಅವರು ಹೇಗೆ ನಿವಾರಿಸುತ್ತಾರೆ ಎಂಬುದು ಕಾದು ನೋಡಬೇಕಿದೆ. ಜಿಲ್ಲೆಯನ್ನು ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡಲು ಮಾಜಿ ಶಾಸಕರಾದ ಬಿ.ಶ್ರೀರಾಮುಲು, ಜಿ.ಸೋಮಶೇಖರರೆಡ್ಡಿ, ಬಿಜೆಪಿ ನಾಯಕಿ ಅರುಣಾ ಲಕ್ಷ್ಮೀ ಹಾಗೂ ನಾನು ಸೇರಿ ಪ್ರತಿ ವಾರ್ಡ್‌ನಲ್ಲೂ ಜಾಗೃತಿ ಸಭೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.