ಪತ್ನಿ, ಮಾವನನ್ನು ಚಾಕು ಇರಿದು ಕೊಂದ ಪತಿ 
ಬಳ್ಳಾರಿ

ಪತ್ನಿ, ಮಾವನನ್ನು ಚಾಕು ಇರಿದು ಕೊಂದ ಪತಿ

ಪ್ರಮುಖ ಮುಖ್ಯಾಂಶಗಳು

  • ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲು
  • ದಂಪತಿ ನಡುವಿನ ಕಲಹ
ಬಳ್ಳಾರಿ : ಪತ್ನಿಯ ನಡತೆಯ ಮೇಲೆ ಅನುಮಾನಗೊಂಡು ನಿತ್ಯ ಜಗಳವಾಡುತ್ತಿದ್ದ ಪತಿ, ರಾಜಿ ಪಂಚಾಯಿತಿ ಮಾಡಲು ಬಂದಿದ್ದ ಮಾವ ಹಾಗೂ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಗುಗ್ಗರಹಟ್ಟಿಯಲ್ಲಿ ನಡೆದಿದೆ.
ನಗರದ ನಿವಾಸಿಗಳಾದ ನಾಗಲಕ್ಷ್ಮೀ(24), ಮೃತಳ ತಂದೆ ಶ್ರೀನಿವಾಸ (48) ಕೊಲೆಯಾದ ದುರ್ದೈವಿಗಳು. ಘಟನೆಗೆ ಸಂಬಂಧಿಸಿದಂತೆ ಆರೋಪಿತರಾದ ಪತಿ ತೇಜ (29), ತಂದೆ ಗುರುಶಂಕರ (50) ಎಂಬುವವರನ್ನು ಬಂಧಿಸಲಾಗಿದೆ.
ಆರೋಪಿಗಳಾದ ತೇಜ ಮತ್ತು ಗುರುಶಂಕರ ವೃತ್ತಿಯಲ್ಲಿ ಧೋಬಿ ಕೆಲಸ ಮಾಡಿಕೊಂಡಿದ್ದರು. ತೇಜ ತನ್ನ ಪತ್ನಿ ನಾಗಲಕ್ಷ್ಮೀ ಅವರ ನಡತೆಯ ಮೇಲೆ ತೀವ್ರ ಅನುಮಾನ ಪಡುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ದಂಪತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ದಂಪತಿ ನಡುವಿನ ಕಲಹ ತಾರಕಕ್ಕೇರಿದ ಹಿನ್ನೆಲೆಯಲ್ಲಿ, ವಿಷಯ ಇತ್ಯರ್ಥ ಪಡಿಸಲು ಮಾವ ಶ್ರೀನಿವಾಸ ಅವರು ಮಗಳ ಮನೆಗೆ ಬಂದಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ.
ಸಿಟ್ಟಿಗೆದ್ದ ತೇಜ ಮತ್ತು ಆತನ ತಂದೆ ಗುರುಶಂಕರ ಸೇರಿ ನಾಗಲಕ್ಷ್ಮೀ ಹಾಗೂ ಶ್ರೀನಿವಾಸ ಅವರ ಮೇಲೆ ಚಾಕುವಿನಿಂದ ಮನಸೋಇಚ್ಛೆ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಎಪಿಎಂಸಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿಗಳನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.