ಬಳ್ಳಾರಿಯ ಗಡಗಿ ಚನ್ನಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಚಿವ ಬಿ.ನಾಗೇಂದ್ರ ಪರ ನಡೆದ ರ‌್ಯಾಲಿಯಲ್ಲಿ ಬಿಜೆಪಿ ನಾಯಕರ ಪ್ರತಿಕೃತಿ ದಹನಗೊಳಿಸಲಾಯಿತು. ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಮೇಯರ್ ಪಿ.ಗಾದೆಪ್ಪ, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ, ಮುಖಂಡರಾದ ವೆಂಕಟೇಶ್ ಹೆಗಡೆ, ಎಚ್.ತಿಮ್ಮನಗೌಡ, ಜಗನ್ ಇತರರಿದ್ದರು. 
ಬಳ್ಳಾರಿ

ಸಚಿವ ನಾಗೇಂದ್ರ ಪರ ಬೃಹತ್ ರ‌್ಯಾಲಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಂದ
  • ಬಿಜೆಪಿ ನಾಯಕರ ಪ್ರತಿಕೃತಿ ದಹನ

ಬಳ್ಳಾರಿ :

ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ವಿರೋಧಿಸಿ, ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ರ‌್ಯಾಲಿ ನಗರದಲ್ಲಿ ನಡೆಯಿತು.

ಇಲ್ಲಿನ ಸಂಗಮ್ ವೃತ್ತದಿಂದ ಆರಂಭವಾದ ಮೆರವಣಿಗೆಯೂ ಗಡಗಿ ಚನ್ನಪ್ಪ ವೃತ್ತದ ಮೂಲಕ ಸಾಗಿ ಡಿಸಿ ಕಚೇರಿಯ ಮುಂಭಾಗದ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿಯ ತಲುಪಿತು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಚಿವ ಬಿ.ನಾಗೇಂದ್ರ ಅವರ ಪರ ಶಕ್ತಿ ಪ್ರದರ್ಶಿಸಿದರು. ಮೆರವಣಿಗೆಯಲ್ಲಿ ಕಾಂಗ್ರೆಸ್ ಧ್ವಜಗಳು ಹಿಡಿದು, ಒಗ್ಗಟ್ಟು ನಮ್ಮ ಶಕ್ತಿ, ನ್ಯಾಯ ನಮ್ಮ ಹಕ್ಕು, ನಾಗೇಂದ್ರ ನಮ್ಮ ನಾಯಕ, ಬಿಜೆಪಿಗೆ ದಿಕ್ಕಾರ ಎಂಬ ಘೋಷಣೆಗಳನ್ನು ಕೂಗಿದರು.

ಇದೇ ವೇಳೆ ಮೆರವಣಿಗೆಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಜಿ.ಜನಾರ್ದನರೆಡ್ಡಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರ ಪ್ರತಿಕೃತಿಗಳನ್ನು ದಹನಗೊಳಿಸಿ ಅಕ್ರೋಶ ವ್ಯಕ್ತಪಡಿಸಿದರು. ಸಾವಿರಾರು ಕಾರ್ಯಕರ್ತರು ಏಕಕಾಲದಲ್ಲಿ ರಸ್ತೆಗಿಳಿದ ಹಿನ್ನಲೆ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು. ಪ್ರತಿಭಟನೆಯ ವೇಳೆ ಬಿಜೆಪಿ ವಿರುದ್ಧ ಹಾಗೂ ಸಚಿವ ಬಿ. ನಾಗೇಂದ್ರ ಅವರ ಪರವಾಗಿ ಘೋಷಣೆಗಳು ಮೊಳಗಿದವು.
ರ‌್ಯಾಲಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನಾಯಕರ ವಿರುದ್ಧವೂ ನೂರರು ಪ್ರಕರಣಗಳಿವೆ. ಆರೋಪಿಗಳನ್ನು ರಕ್ಷಿಸುತ್ತಿರುವ ಬಿಜೆಪಿ ಮೊದಲು ತನ್ನ ಪಕ್ಷದ ನಾಯಕರ ವಿರುದ್ಧದ ಪ್ರಕರಣಗಳ ಬಗ್ಗೆ ಉತ್ತರಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿಯ ರಾಜಕೀಯ ದ್ವೇಷದ ಆರೋಪಗಳಿಗೆ ಕಾಂಗ್ರೆಸ್ ಪಕ್ಷ ಎದರುವುದಿಲ್ಲ. ಸಚಿವ ಬಿ.ನಾಗೇಂದ್ರ ಅವರ ಪರ ಪಕ್ಷದ ಲಕ್ಷಾಂತರು ಕಾರ್ಯಕರ್ತರು ಒಗ್ಗಟ್ಟಾಗಿದ್ದೇವೆ ಎಂದರು.
ರಾಜ್ಯದಲ್ಲಿ ಮಳೆ ಕೊರತೆಯಿಂದ ಬರಗಾಲ ಬಂದಿದೆ. ಅಧಿವೇಶನದಲ್ಲಿ ಚರ್ಚಿಸದೆ ಬಿಜೆಪಿ ನಾಯಕರು ಸದನ ಹಾಳುಗೆಡುತ್ತಿದ್ದಾರೆ. ಕೂಡಲೇ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಸ್ಥಗಿತಗೊಳಿಸಿ, ಸದನದಲ್ಲಿ ಚರ್ಚಿಸಲಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು ಮಾತನಾಡಿ, ರಾಜ್ಯದಲ್ಲಿರುವುದು ಡಿ.ಕೆ.ಶಿವಕುಮಾರ್ ಸರ್ಕಾರ. ಬಿಜೆಪಿ ಇಂತಹ ಬೆದರಿಕೆಗಳಿಗೆ ಎದುರುವುದಿಲ್ಲ. ಬಂಡೆಯಂತೆ ದಿಟ್ಟ ಹೋರಾಟ ನಡೆಸಲಿದ್ದೇವೆ ಎಂದು ವಾಗ್ದಳಿ ನಡೆಸಿದರು.