ಹಗರಿಬೊಮ್ಮನಹಳ್ಳಿ ಪುರಸಭೆ ಸಭಾಂಗಣದಲ್ಲಿ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಮರಿರಾಮಪ್ಪ ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸದಸ್ಯರಾದ ನೆಲ್ಲು ಇಸ್ಮಾಯಿಲ್, ಅಜೀಜುಲ್ಲಾ, ಮಾಜಿ ಸದಸ್ಯ ಅಲ್ಲಾಭಕ್ಷಿ, ಅಂಬಳಿ ರವೀಂದ್ರ ಗೌಡ ಇತರರಿದ್ದರು. 
ಬಳ್ಳಾರಿ

ಸಾರ್ವಜನಿಕರ ಸಮಸ್ಯೆಗಳಿಗೆ ನಾವು ಹೇಗೆ ಉತ್ತರಿಸುವುದು?

ಪ್ರಮುಖ ಮುಖ್ಯಾಂಶಗಳು

  • ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ ಮರಿರಾಮಪ್ಪಗೆ ಸದಸ್ಯರ ಪ್ರಶ್ನೆ
  • ಬಜೆಟ್ ಪೂರ್ವಭಾವಿ ಸಭೆ ಮೊಟಕು
ಹಗರಿಬೊಮ್ಮನಹಳ್ಳಿ: ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ ಮರಿರಾಮಪ್ಪ ಅಧ್ಯಕ್ಷತೆಯಲ್ಲಿ ಮಂಗಳವಾರ ಬಜೆಟ್ ಪೂರ್ವಭಾವಿ ಸಭೆ ನಡೆಯಿತು.
ಅಧ್ಯಕ್ಷ ಮರಿರಾಮಪ್ಪ 2026-27ನೇ ಸಾಲಿನ ಅಂದಾಜು ಅನುದಾನದ ವಿವರ ಮಂಡಿಸಿದರು. ಆಗ ಮಾತನಾಡಿದ ಸದಸ್ಯ ಎಲ್.ಗಣೇಶ, 17 ತಿಂಗಳಿಂದ ಸಾಮಾನ್ಯ ಸಭೆ ಕರೆದಿಲ್ಲ, ಸಾರ್ವಜನಿಕರ ಸಮಸ್ಯೆಗಳಿಗೆ ನಾವು ಉತ್ತರಿಸುವುದು ಹೇಗೆ ಎಂದು ಪ್ರಶ್ನಿಸಿದರು. ನಿಮಗೆ ಏನು ಕೆಲಸಗಳು ಆಗಬೇಕೆಂದು ಅಧ್ಯಕ್ಷ ಮರಿರಾಮಪ್ಪ ಪ್ರಶ್ನಿಸಿದರು. ಆಗ ಕೆಲ ಸದಸ್ಯರು ಎದ್ದು ನಿಂತು ನಮ್ಮ ವಾರ್ಡ್‌ಗಳಲ್ಲಿ ಕೆಲಸಗಳು ಆಗಿಲ್ಲ ಎಂದು ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದರು.
ಮಾತಿನ ಚಕಮಕಿ ತಾರಕಕ್ಕೇರಿದ ಬಳಿಕ ನೀವು ನನಗೆ ಹೆದರಿಸಿದರೆ ನಾನು ಹೆದರುವವನಲ್ಲ ಎಂದು ಅಧ್ಯಕ್ಷ ಮರಿರಾಮಪ್ಪ ಸದಸ್ಯರಿಗೆ ತಿರುಗೇಟು ನೀಡಿದರು. ಆಗ ಸದಸ್ಯರು ಆ ಮಾತು ವಾಪಸ್ ತೆಗೆದುಕೊಳ್ಳಿ ಎಂದರು. ಆಗ ಸದಸ್ಯ ಗಣೇಶ ಮಾತನಾಡಿ, ನಿಮ್ಮ ಸ್ವಾರ್ಥಕ್ಕೆ ನಮ್ಮನ್ನು ಬಲಿಕೊಡಬೇಡಿ ಎಂದರು. ಮಾತಿಗೆ ಮಾತು ಬೆಳೆದು ಅಧ್ಯಕ್ಷರ ಟೇಬಲ್ ಮುಂದೆ ಧಾವಿಸಿದ ಸದಸ್ಯರು ಆಕ್ರೋಶ ಹೊರಹಾಕಿದರು. ಮುಖ್ಯಾಧಿಕಾರಿ ಎಂ.ಕೆ.ಮುಗುಳಿ ಸಮಾಧಾನ ಪಡಿಸಿಲು ಯತ್ನಿಸಿದರು.
ಸದಸ್ಯರಾದ ನೆಲ್ಲು ಇಸ್ಮಾಯಿಲ್, ಅಜೀಜುಲ್ಲಾ, ಮಾಜಿ ಸದಸ್ಯ ಅಲ್ಲಾಭಕ್ಷಿ ಹಾಗೂ ಅಂಬಳಿ ರವೀಂದ್ರ ಗೌಡ ಮಾತನಾಡಿ, ಪಟ್ಟಣದಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ, ಗ್ಯಾಸ್ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆಗಳನ್ನು ಅಗೆದು, ತೇಪೆ ಹಾಕುವ ಮತ್ತು ಪರವಾನಿಗೆ ನೀಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಯಾವುದೇ ಕಾಮಗಾರಿ ಕೈಗೊಂಡರೂ ನಮ್ಮ ಗಮನಕ್ಕೆ ತರುವುದಿಲ್ಲ ಎಂದು ಆರೋಪಿಸಿದರು.
ಸಾಮಾನ್ಯ ಸಭೆ ಕರೆಯಬೇಕೆಂದು ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮಾ.3ರಂದು ಸಾಮಾನ್ಯ ಸಭೆ ನಡೆಸಲಾಗುವುದು ಎಂದು ಅಧ್ಯಕ್ಷ ಮರಿರಾಮಪ್ಪ ಪ್ರಕಟಿಸಿದರು. ಬಜೆಟ್ ಪೂರ್ವಭಾವಿ ಸಭೆ ಮೊಟಕುಗೊಂಡಿದ್ದರಿಂದ ಸಾರ್ವಜನಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ನಿರಾಸೆಯಿಂದ ಹಿಂದಿರುಗಿದರು. ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತವಿದ್ದು, ಆಡಳಿತ ಪಕ್ಷದ ಸದಸ್ಯರ ನಡುವೆ ಅಧಿಕಾರ ಹಾಗೂ ಕೆಲಸಗಳಿಗೆ ಸಂಬಂಧಿಸಿದ ಅತೃಪ್ತಿ ಇರುವುದು ಕಂಡುಬಂತು. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮಹಿಳಾ ಸದಸ್ಯರು ಹಾಗೂ ಉಪಾಧ್ಯಕ್ಷೆ ಮೂಕಪ್ರೇಕ್ಷಕರಾಗಿದ್ದರು.