ಹೊನ್ನರಹಳ್ಳಿಯ ವಸತಿ ಮನೆಗಳು.
- ಹೊನ್ನರಹಳ್ಳಿಯಲ್ಲಿ ಸಂತ್ರಸ್ತರಿಗೆ ಸಿಗದ ಮನೆ-ಖಾತೆ
ಸಿರಗುಪ್ಪ: ಪ್ರವಾಹಕ್ಕೆ ತುತ್ತಾಗಿ ಸ್ಥಳಾಂತರಗೊಂಡ ತಾಲೂಕಿನ ಹೊನ್ನರಹಳ್ಳಿಯಲ್ಲಿ ಸರ್ಕಾರ ನಿರ್ಮಿಸಿದ ವಸತಿಗಳನ್ನು ಬೇರೆ ಗ್ರಾಮದವರಿಗೆ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
2009ರಲ್ಲಿ ತುಂಗಭದ್ರಾ ನದಿ ಪ್ರವಾಹಕ್ಕೆ ಹೊನ್ನರಹಳ್ಳಿ ತುತ್ತಾದ ಸಂದರ್ಭ ಅಂದಿನ ಸರ್ಕಾರವು 2011ರಲ್ಲಿ 250 ಮನೆಗಳನ್ನು ನಿರ್ಮಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಿತ್ತು. ಆ ಸಂದರ್ಭ 124 ಮನೆಗಳನ್ನು ಮಾತ್ರ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿತ್ತು. ಉಳಿದ 126 ಮನೆಗಳನ್ನು ಹಂಚಿಕೆ ಮಾಡದೆ, ತಹಸೀಲ್ದಾರ್ ಹೆಸರಲ್ಲೇ ಇರಿಸಲಾಗಿತ್ತು. ಇಲ್ಲಿಯವರೆಗೂ ಅವು ಅರ್ಹರಿಗೆ ಹಂಚಿಕೆಯಾಗಿಲ್ಲ. ಹಂಚಿಕೆಯಾಗದ ಮನೆಗಳ ಪೈಕಿ ಕೆಲವೊಂದನ್ನು ಇತರೆ ಗ್ರಾಮದವರಿಗೆ ಖಾತೆ ನೀಡಲಾಗಿದೆ. ಪ್ರಭಾವಿಗಳ ಕೈಚಳಕದಿಂದ ಹಂಚಿಕೆಯಾಗದ ಮನೆಗಳ ಖಾತೆಯನ್ನು ಅಕ್ರಮವಾಗಿ ಪಡೆದಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಸ್ವಗ್ರಾಮದ ಕೆಲವರಿಗೆ ಮನೆ ಹಂಚಿಕೆ ಮಾಡಿದ್ದರೂ ಅವರ ಹೆಸರಿಗೆ ಇನ್ನೂ ಖಾತೆ ನೀಡಿಲ್ಲ. ಖಾತೆ ನೀಡುವಂತೆ 15 ವರ್ಷಗಳಿಂದ ಕಚೇರಿಗಳಿಗೆ ಅಲೆದರೂ ಪ್ರಯೋಜನವಾಗಿಲ್ಲ. ಆದರೆ ಬೇರೆ ಗ್ರಾಮದವರಿಗೆ ಖಾತೆ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಅಕ್ರಮವಾಗಿ ಮನೆಗಳನ್ನು ಹಂಚಿಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸಿಗೆ ಗ್ರಾಮಸ್ಥರಾದ ರತ್ನಮ್ಮ, ಬಸಮ್ಮ, ನಾಗರತ್ನಮ್ಮ, ಮಹಾದೇವಿ, ರೇಣುಕಮ್ಮ, ಉಮಾದೇವಿ ಹಾಗೂ ಖಾಸಿಂ ಸಾಬ್ ದೂರು ಸಲ್ಲಿಸಿದ್ದಾರೆ.
ಅಕ್ರಮವಾಗಿ ಖಾತೆಗಳನ್ನು ನೀಡಿರುವ ಕುರಿತು ತಹಸೀಲ್ದಾರರಿಂದ ಯಾವುದೇ ಪತ್ರ ಬಂದಿಲ್ಲ, ಅಲ್ಲಿನ ಪಿಡಿಒ ಹತ್ತಿರ ಮಾಹಿತಿ ಪಡೆದು ಪರಿಶೀಲಿಸುವೆ
ಅಕ್ರಮ ಖಾತೆ ಹಂಚಿಕೆ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಏ.9ರಂದು ತಾಪಂ ಇಒಗೆ ಪತ್ರ ಬರೆಯಲಾಗಿದ್ದು, ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು.