ವಿದ್ಯಾರ್ಥಿ ನಿಲಯ ಕೊಠಡಿಯಲ್ಲಿ ಆರ್‌ಸಿಸಿ ಕಳಚಿರುವುದು. 
ಬಳ್ಳಾರಿ

ಹಾಸ್ಟೆಲ್ ಶಿಥಿಲ ಮಕ್ಕಳು ತಳಮಳ Hostel Dilapidated

ಪ್ರಮುಖ ಮುಖ್ಯಾಂಶಗಳು

  • ಇನ್ನೂರು ವಿದ್ಯಾರ್ಥಿನಿಯರಿಗೆ ಐದೇ ಕೊಠಡಿ
  • ದುಸ್ಥಿತಿಯಲ್ಲಿ ವಸತಿ ನಿಲಯ
ವಿಶ್ವನಾಥ ಬಾವಿಕಟ್ಟಿ ಹಗರಿಬೊಮ್ಮನಹಳ್ಳಿ
ಮೂವತ್ತನೇ ವರ್ಷಕ್ಕೆ ಕಾಲಿಟ್ಟಿರುವ ಪಟ್ಟಣದ ಸಕ್ರಿಹಳ್ಳಿ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಮಳೆ ಬಂದರೆ ಸೋರುವ ಛಾವಣಿ, ಉದುರುವ ಸಿಮೆಂಟ್ ಚಕ್ಕೆಗಳ ನಡುವೆಯೇ 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆತಂಕದಲ್ಲಿ ದಿನದೂಡುವಂತಾಗಿದೆ.
1996ರ ಡಿ.08ರಂದು ಉದ್ಘಾಟನೆಗೊಂಡ ಈ ಕಟ್ಟಡವು ಈಗ ಹಳೆಯದಾಗಿರುವುದರಿಂದ ಮಳೆಗಾಲದಲ್ಲಿ ಮೇಲ್ಛಾವಣಿ ನೀರು ಹಿಡಿಯುತ್ತದೆ. ಜಿಟಿಜಿಟಿ ಎಂದು ಎರಡ್ಮೂರು ದಿನ ಮಳೆಯಾದರೆ ಇಡೀ ಕಟ್ಟಡ ಜಿನುಗುತ್ತದೆ. ಅದರಲ್ಲೂ ಮೇಲ್ಛಾವಣಿಯ ಆರ್‌ಸಿಸಿ ಕಳಚಿ ಕೆಳಗೆ ಬೀಳುತ್ತಿದ್ದು, ಅದರ ಕೆಳಗಡೆಯೇ ಮಕ್ಕಳು ಮಲಗುತ್ತಾರೆ ಹಾಗೂ ಪಾಠ ಓದುತ್ತಾರೆ.
ಈ ವಸತಿ ನಿಲಯದಲ್ಲಿ ಅಡುಗೆ ಕೋಣೆ, ಕಚೇರಿ ಮತ್ತು ಆಹಾರ ದಾಸ್ತಾನು ಕೊಠಡಿಗಳು ಸೇರಿ ಒಟ್ಟು 10 ಕೊಠಡಿಗಳು ಲಭ್ಯವಿದ್ದರೂ, ವಿದ್ಯಾರ್ಥಿನಿಯರ ವಾಸಕ್ಕೆ ಐದು ಕೊಠಡಿಗಳು ಮಾತ್ರ ಇವೆ. ಹಾಸ್ಟೆಲ್ ದಾಖಲಾತಿ ನಿಯಮದಂತೆ 100 ವಿದ್ಯಾರ್ಥಿಗಳಿರಬೇಕಾದ ಇಲ್ಲಿ 200ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಪಾಲಕರು ಉದ್ಯೋಗ ಅರಸಿ ಗುಳೆ ಹೋಗುವುದು ಮತ್ತು ಸುತ್ತಮುತ್ತ ಉತ್ತಮ ಶಾಲೆಗಳಿರುವುದು ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ.
200ಕ್ಕೂ ಅಧಿಕ ವಿದ್ಯಾರ್ಥಿನಿಯರಿಗಾಗಿ ಇಲ್ಲಿ ಕೇವಲ ನಾಲ್ಕು ಬಾತ್ ರೂಮ್ ಹಾಗೂ ನಾಲ್ಕು ಶೌಚಗೃಹಗಳು ಮಾತ್ರ ಇವೆ. ಇದು ವಿದ್ಯಾರ್ಥಿನಿಯರ ಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆ. ಹಾಸ್ಟಲ್ ಆವರಣದಲ್ಲಿದ್ದ ಕೊಳವೆಬಾವಿ 2018ರಲ್ಲೇ ಕೆಟ್ಟು ನಿಂತಿದೆ. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಇರುವ ಸಮಸ್ಯೆಗಳ ನಡುವೆಯೂ ಸ್ವಚ್ಛತೆ ಕಾಪಾಡಲಾಗಿದೆ. ಹಾಸ್ಟೆಲ್ ನಿರ್ವಹಣೆಗೆ ಒಬ್ಬರು ವಾರ್ಡನ್, ಮೂವರು ಅಡುಗೆ ನೌಕರರು, ಮೂವರು ಗುತ್ತಿಗೆ ಆಧಾರದ ಸಹಾಯಕರು ಹಾಗೂ ರಾತ್ರಿ ಕಾವಲಿಗೆ ಒಬ್ಬರು ಸೇರಿ ಒಟ್ಟು ಏಳು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಾಸ್ಟಲ್ ಹಳೇ ಕಟ್ಟಡವಾಗಿದ್ದು, ಇಲಾಖೆಯ ಡಿಡಿ ಮೂಲಕ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ, ಹಳೇ ಕಟ್ಟಡ ತೆರವುಗೊಳಿಸಿ ಹೊಸದಾಗಿ ನಿರ್ಮಾಣವಾಗಬೇಕಾಗಿದೆ. ಇರುವ ಐದು ಕೊಠಡಿ ಬದಲಾಗಿ ಏಳು ಕೊಠಡಿಗಳಾಗಬೇಕು ಮತ್ತು ಹೊಸ ಶೌಚಗೃಹಗಳಾಗಬೇಕು. ಈಗಾಗಲೇ ಒಂದು ಬೋರ್‌ವೆಲ್ ಹಾಕಿಸಲು ಎಸ್‌ಸಿಪಿ ಯೋಜನೆಯಡಿ ಮೂರು ಲಕ್ಷ ರೂ.ಗಳು ಮಂಜೂರು ಆಗಿದೆ. ವಿಶಾಲವಾದ ಆವರಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಇದೆ.

ಹಾಸ್ಟಲ್ನಲ್ಲಿ ಸೌಲಭ್ಯಗಳಿಗೇನು ಕೊರತೆ ಇಲ್ಲ, ಕಟ್ಟಡ ಹಳೆಯದಾಗಿದ್ದು, ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಹೊಸ ಕಟ್ಟಡ ಮತ್ತು ಹೆಚ್ಚುವರಿ ಕೊಠಡಿಗಳು ನಿರ್ಮಾಣವಾದರೆ ಇನ್ನೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿಗೂ ಅನುಕೂಲವಾಗಲಿದೆ. ಪುರಸಭೆಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ.