ಕೊಟ್ಟೂರು/ವಿಜಯನಗರ: ಜನ್ಮ ನೀಡಿದ ತಂದೆ-ತಾಯಿ ಮತ್ತು ಒಡಹುಟ್ಟಿದ ತಂಗಿಯನ್ನೇ ಅಮಾನುಷವಾಗಿ ಕೊಲೆ ಮಾಡಿ, ಮನೆಯ ಹಾಲ್‌ನಲ್ಲೇ ಹೂತು ಹಾಕಿದ್ದ ನರಹಂತಕ ಮಗ ಅಕ್ಷಯ್ ಕುಮಾರ್ (24) ಈಗ ಪೊಲೀಸರ ಅತಿಥಿಯಾದ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದಿದೆ.
ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಲು ಹೋಗಿ ಸಿಕ್ಕಿಬಿದ್ದ!
ಆರೋಪಿ ಅಕ್ಷಯ್ ಕುಮಾರ್ ಕೊಟ್ಟೂರಿನ ಮನೆಯಲ್ಲಿ ತನ್ನ ತಂದೆ ಭೀಮರಾಜ್, ತಾಯಿ ಜಯಲಕ್ಷ್ಮಿ ಮತ್ತು ಸಹೋದರಿ ಅಮೃತಾಳನ್ನು ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದ. ಬಳಿಕ ಮನೆಯ ಹಾಲ್‌ನಲ್ಲಿದ್ದ ಟೈಲ್ಸ್‌ಗಳನ್ನು ಕಿತ್ತು, 4 ಅಡಿ ಆಳದ ಗುಂಡಿ ತೋಡಿ ಮೂವರನ್ನೂ ಒಂದೇ ಕುಣಿಯಲ್ಲಿ ಹೂತು ಹಾಕಿದ್ದ. ತನಿಖೆಯ ದಿಕ್ಕು ತಪ್ಪಿಸಲು ತಕ್ಷಣ ಬೆಂಗಳೂರಿಗೆ ತೆರಳಿದ್ದ ಈತ, ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ತನ್ನ ಕುಟುಂಬದವರು ಕಾಣೆಯಾಗಿದ್ದಾರೆ ಎಂದು ಮಿಸ್ಸಿಂಗ್ ಕೇಸ್ (ಕ್ರೈಂ ನಂಬರ್ 35/26) ದಾಖಲಿಸಿದ್ದನು ಎಂದು ವಿಜಯನಗರ ಜಿಲ್ಲಾ ಎಸ್ಪಿ ಜಾಹ್ನವಿ ತಿಳಿಸಿದರು.
ದ್ವಂದ್ವ ಹೇಳಿಕೆಯೇ ಮುಳುವಾಯಿತು!
"ನನ್ನ ತಂದೆ-ತಾಯಿ ಜಯದೇವ ಆಸ್ಪತ್ರೆಗೆ ಹೋಗಿದ್ದರು, ಅಲ್ಲಿಂದ ವಾಪಸ್ ಬಂದಿಲ್ಲ" ಎಂದು ಅಕ್ಷಯ್ ದೂರು ನೀಡಿದ್ದ. ಆದರೆ, ವಿಚಾರಣೆ ವೇಳೆ ಈತ ನೀಡಿದ ಪರಸ್ಪರ ವಿರೋಧದ ಹೇಳಿಕೆಗಳು ಪೊಲೀಸರಿಗೆ ಸಂಶಯ ಮೂಡಿಸಿದವು. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಅಕ್ಷಯ್ ಅಸಲಿ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ತಾನೇ ಮೂವರನ್ನು ಕೊಲೆ ಮಾಡಿ ಮನೆಯ ಹಾಲ್‌ನಲ್ಲಿ ಹೂತಿಟ್ಟಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದರು.
ಮನೆಯ ಹಾಲ್‌ನಲ್ಲಿ ಶವಗಳ ರಾಶಿ
ಆರೋಪಿ ನೀಡಿದ ಮಾಹಿತಿಯ ಆಧಾರದ ಮೇಲೆ ಬೆಂಗಳೂರಿನ ಪೊಲೀಸರು ಕೊಟ್ಟೂರಿಗೆ ದೌಡಾಯಿಸಿದ್ದರು. ಅಲ್ಲಿ ಮನೆಯ ಟೈಲ್ಸ್ ಕಿತ್ತು ಗುಂಡಿ ಅಗೆದಾಗ ಮೂವರ ಮೃತದೇಹಗಳು ಪತ್ತೆಯಾಗಿವೆ. ಮೊದಲು ತಾಯಿ ಜಯಲಕ್ಷ್ಮಿ, ನಂತರ ತಂಗಿ ಅಮೃತಾ ಮತ್ತು ಕೊನೆಯಲ್ಲಿ ತಂದೆ ಭೀಮರಾಜ್ ಅವರ ಶವಗಳನ್ನು ಒಂದರ ಮೇಲೊಂದರಂತೆ ಅತೀ ಕ್ರೂರವಾಗಿ ಹಾಕಲಾಗಿತ್ತು.
"ಆರೋಪಿ ಅತ್ಯಂತ ಚಾಣಾಕ್ಷತನದಿಂದ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾನೆ. ಆದರೆ ಬೆಂಗಳೂರು ಪೊಲೀಸರ ಸಮಯಪ್ರಜ್ಞೆಯಿಂದ ಸತ್ಯ ಬಯಲಾಗಿದೆ. ಕೊಲೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ" ಎಂದು ಎಸ್ಪಿ ಜಾಹ್ನವಿ ಹೇಳಿದ್ದಾರೆ.