ಶ್ರೀ ಸಿದ್ದೇಶ್ವರ ಸ್ವಾಮಿಯ ದೇವಸ್ಥಾನ.
- ಸಿದ್ದೇಶ್ವರ ಸ್ವಾಮಿ
- ಐತಿಹಾಸಿ ಹಿನ್ನೆಲೆ
ಹೊಳಗುಂದಿ-ಬಾವಿಹಳ್ಳಿಯ ಸಿದ್ದೇಶ್ವರ ಸ್ವಾಮಿ ರಥೋತ್ಸವ ಇಂದು
ಹೂವಿನಹಡಗಲಿ: ತಾಲೂಕಿನ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಹೊಳಗುಂದಿ-ಬಾವಿಹಳ್ಳಿಯ ಗುಡ್ಡದ ಸಿದ್ದೇಶ್ವರ ಸ್ವಾಮಿಯ ರಥೋತ್ಸವ ಜ.2ರಂದು ಅದ್ದೂರಿಯಾಗಿ ಜರುಗಲಿದೆ. ಗ್ರಾಮಸ್ಥರು ದೇವಸ್ಥಾನ ಹಾಗೂ ಮನೆಗಳಿಗೆ ಸುಣ್ಣ-ಬಣ್ಣದಿಂದ ಸಿಂಗರಿಸಿದ್ದಾರೆ.
ಗ್ರಾಮದಲ್ಲಿ ಬುಧವಾರದಿಂದಲೇ ಉತ್ಸವ ಮೂರ್ತಿ ಮೆರವಣಿಗೆಯೊಂದಿಗೆ ಸಿದ್ದೇಶ್ವರ ಸ್ವಾಮಿ ಜಾತ್ರೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಗಳನ್ನು ಆರಂಭಿಸಲಾಗಿದೆ. ಶನಿವಾರ ಸ್ವಾಮಿಯ ಅಗ್ನಿ ಜರುಗಲಿದೆ. ಪ್ರತಿವರ್ಷ ಸಿದ್ದೇಶ್ವರ ಸ್ವಾಮಿಯ ಚರಿತ್ರೆ ಸೇರಿ ಇತರೆ ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಕಲೆಗಳ ತವರೂರು ಎಂಬ ಹೆಗ್ಗೆಳಿಕೆಗೆ ಗ್ರಾಮ ಹೆಸರುವಾಸಿಯಾಗಿದೆ.
ಪೌರಾಣಿಕ ಹಾಗೂ ಐತಿಹಾಸಿ ಹಿನ್ನೆಲೆ
ಉಜೈಯಿನಿ ಮಹಾಸ್ವಾಮೀಜಿ ಲೋಕಕಲ್ಯಾಣಕ್ಕಾಗಿ ದಕ್ಷಿಣ ಭಾರತದಲ್ಲಿ ಮಠ ಸ್ಥಾಪಿಸಲು ಪ್ರವಾಸಕ್ಕೆ ಬಂದ ಸಂದರ್ಭದಲ್ಲಿ ಗ್ರಾಮದ ಹತ್ತಿರವಿರುವ ಗುಡ್ಡದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಗುಡ್ಡಕ್ಕೆ ಸಿದ್ದರಬೆಟ್ಟ ಎಂದು ನಾಮಕರಣ ಮಾಡಿ ದೇವಸ್ಥಾನ ನಿರ್ಮಿಸಲು ಗ್ರಾಮಸ್ಥರ ಬಳಿ ವಿಷಯ ಪ್ರಸ್ತಾಪಿಸುತ್ತಾರೆ. ಗ್ರಾಮಸ್ಥರು ಕಾಡು ಪ್ರಾಣಿಗಳು ವಾಸವಾಗಿರುವ ಸ್ಥಳದಲ್ಲಿ ದೇವಸ್ಥಾನ ಬೇಡ ಎಂದು ಹೇಳುತ್ತಾರೆ.
ನಂತರ ಶ್ರೀಗಳು ಇಷ್ಟಲಿಂಗ ಪೂಜೆ ಮಾಡಿ ಅಲ್ಲಿಯೇ ಪ್ರತಿಷ್ಠಾಪಿಸಿ ದೇವಸ್ಥಾನ ನಿರ್ಮಾಣ ಮಾಡುವಂತೆ ತಿಳಿಸುತ್ತಾರೆ. ಗ್ರಾಮದ ಹಿರಿಕರ ಗೌರಿ ಹಸುವೊಂದು ದನಗಾಯಿಯೊಂದಿಗೆ ಗುಡ್ಡಕ್ಕೆ ಬಂದಾಗ ಮೂರು ದಿನಗಳ ಕಾಲ ಹಾಲು ಕರಿಯುವುದಿಲ್ಲ. ಇದರಿಂದ ಕೋಪಗೊಂಡ ಹಸುವಿನ ಒಡೆಯ ದನಗಾಯಿಗೆ ಹೊಡೆಯುತ್ತಾನೆ.
ನಂತರ ದನಗಾಯಿ ಹಸುವನ್ನು ಹಿಂಬಾಲಿಸಿದಾಗ ಗುಡ್ಡದ ಪೊದೆಯಲ್ಲಿದ್ದ ಲಿಂಗಕ್ಕೆ ಹಾಲಿನ ಅಭಿಷೇಕ ಮಾಡುತ್ತಿರುತ್ತದೆ. ಇದನ್ನು ಗಮನಿಸಿದ ಗ್ರಾಮಸ್ಥರು ಗುಡ್ಡದಲ್ಲಿ ಶ್ರೀಸ್ವಾಮಿಗೆ ದೇವಸ್ಥಾನ ನಿರ್ಮಿಸುತ್ತಾರೆ. ಅಂದಿನಿಂದ ಸ್ವಾಮಿಯ ಪವಾಡಗಳು ನಡೆಯುತ್ತಿವೆ ಎಂಬುದು ಭಕ್ತರ ನಂಬಿಕೆ.
ಸ್ಥಳ ಪುರಾಣ
ಹೊಳಗುಂದಿ ಗ್ರಾಮ ಐತಿಹಾಸಿಕ ಹಿನ್ನಲೆಯ ಪ್ರಕಾರ 10ನೇ ಶತಮಾನದಲ್ಲಿ ಪೊಳಲ್ಗುಂದೆ ಎಂದು ಕರೆಯಲಾಗುತ್ತಿತ್ತು. ನಂತರ ಪೊಳಲ್ಗುನ್ದೆ, ಹೊಳಲುಗುಂದಿ ಎಂದು ಬಳಕೆ ಬಂದಿದೆ. ಇದು ಸುತ್ತಲಿನ ಗ್ರಾಮಗಳಲ್ಲಿರುವ ಐತಿಹಾಸಿಕ ದೇವಸ್ಥಾನಗಳಲ್ಲಿನ ಶಾಸನಗಳಿಂದ ತಿಳಿಯುತ್ತದೆ. ಪೊಳಲ್ ಎಂದರೆ ಪಟ್ಟಣ, ಗುಂದೆ ಎಂದರೆ ಗುಡ್ಡ/ಬೆಟ್ಟಗಳ ಪಕ್ಕದ ಗ್ರಾಮ.
ಪೊಳಲ್ಗುಂದೆ(ಪೊಳಲ್+ಗುಂದೆ) ಎಂಬುದು ಆಗಿನ ಕಾಲದ ಪ್ರಮುಖ ವ್ಯಾಪಾರ ಕೇಂದ್ರ ಹಾಗೂ ಪಟ್ಟಣವಾಗಿತ್ತು ಎಂಬುದು ಅನೇಕ ಶಾಸನಗಳಿಂದ ತಿಳಿದು ಬಂದಿದೆ. ಪಕಾರಕ್ಕೆ ಹಕಾರ ಸೇರಿ ಪೊಳಲ್ಗುಂದಿಯು ಹೊಳಗುಂದಿಯಾಗಿದೆ. ಹೊಳಗುಂದಿಯು ವೀರಾಪುರ, ಸಿದ್ದಾಪುರ, ಬೈರಾಪುರ, ಗಿರಿಯಾಪುರ, ಸೋಮಾಪುರ, ಅರಕೇರಿ ಹಾಗೂ ಅಗಸನಕಟ್ಟೆ ಎಂಬ ಏಳು ಹಳ್ಳಿಗಳನ್ನು ಹೊಂದಿತ್ತು ಎಂಬುದು ಜನಪದೀಯ ಕಥೆ. ಈ ಏಳು ಹಳ್ಳಿಗಳು ಸೇರಿ ಹೊಳಗುಂದಿ ಆಗಿದೆ ಎಂಬ ಐತಿಹ್ಯವಿದೆ.