ಕಂಪ್ಲಿ ತಹಸೀಲ್ದಾರ್ ಜೂಗಲ ಮಂಜುನಾಯಕಗೆ ನಾನಾ ಸಂಘಟನೆಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪ್ರಮಮುಖರಾದ ವಸಂತರಾಜ ಕಹಳೆ, ಕರಿಯಪ್ಪ ಗುಡಿಮನಿ, ರವಿ ಮಣ್ಣೂರು, ಕೆ.ಲಕ್ಷ್ಮಣ, ಪಿ.ಯುಗಂಧರನಾಯ್ಡು ಇತರರಿದ್ದರು. 
ಬಳ್ಳಾರಿ

ಆಸ್ಪತ್ರೆಗೆ ಸ್ತ್ರೀರೋಗ ತಜ್ಞರನ್ನು ನೇಮಿಸಿ

ಪ್ರಮುಖ ಮುಖ್ಯಾಂಶಗಳು

  • ನಾನಾ ಸಂಘಟನೆ ಪದಾಧಿಕಾರಿಗಳಿಂದ
  • ತಹಸೀಲ್ದಾರ್‌ಗೆ ಮನವಿ
  • ಸಮುದಾಯ ಆರೋಗ್ಯ ಕೇಂದ್ರ
ಕಂಪ್ಲಿ: ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ತ್ರೀರೋಗ ತಜ್ಞ ವೈದ್ಯರನ್ನು ನೇಮಿಸುವಂತೆ ಆಗ್ರಹಿಸಿ ನಾನಾ ಸಂಘಟನೆ ಪದಾಧಿಕಾರಿಗಳು ತಹಸೀಲ್ದಾರ್ ಜೂಗಲ ಮಂಜುನಾಯಕ, ತಾಲೂಕು ಆರೋಗ್ಯ ಮೇಲ್ವಿಚಾರಣಾಧಿಕಾರಿ ಡಾ.ಜಿ.ಅರುಣ್‌ಗೆ ಬುಧವಾರ ಮನವಿ ಸಲ್ಲಿಸಿದರು.
ಜನಶಕ್ತಿ ಸಂಘಟನೆ ರಾಜ್ಯ ಸಮಿತಿ ಸದಸ್ಯ ವಸಂತರಾಜ ಕಹಳೆ ಮಾತನಾಡಿ, ಸೆ.25ರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಕಾಯಂ ಸ್ತ್ರೀರೋಗ ತಜ್ಞರಿಲ್ಲದಿದ್ದರಿಂದ ಹೆರಿಗೆಗಳಾಗುತ್ತಿಲ್ಲ. ಹೆರಿಗೆಗಾಗಿ ಗಂಗಾವತಿ ಸೇರಿ ಬೇರೆಡೆ ತೆರಳಲು ಶಿಫಾರಸು ಮಾಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗೆ ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದವರೇ ಹೆಚ್ಚು ಬರುತ್ತಿದ್ದು ತಜ್ಞ ವೈದ್ಯರ ಕೊರತೆಯಿಂದ ಬೇರೆಡೆ ತೆರಳಬೇಕಾಗುತ್ತಿದ್ದು, ಆರ್ಥಿಕ ಹೊರೆಯಾಗುತ್ತಿದೆ.
ಹೆರಿಗೆಗೆ ಬರುವ ಗರ್ಭಿಣಿಯರಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಪ್ರಾಣಾಪಾಯವಾದಲ್ಲಿ ಯಾರು ಹೊಣೆ ?. ಗರ್ಭಿಣಿಯರ ಪ್ರಾಣದ ಜತೆ ಚೆಲ್ಲಾಟವಾಡದೆ ವಾರದೊಳಗೆ ಕಾಯಂ ಸ್ತ್ರೀರೋಗ ತಜ್ಞರನ್ನು ನೇಮಿಸಬೇಕು. ಇಲ್ಲದಿದ್ದಲ್ಲಿ ಸಂಚಾರತಡೆ ನಡೆಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಎಂ.ಆರ್.ಐ, ಆಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೊದಲಾದ ಆಧುನಿಕ ಪರಿಕರಗಳನ್ನು ಅಳವಡಿಸಿ ಹೆಚ್ಚಿನ ಚಿಕಿತ್ಸೆ ಒದಗಿಸಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ದೂರವಾಣಿ ಮೂಲಕ ಜಿಲ್ಲಾ ವೈದ್ಯಾಧಿಕಾರಿ ಡಾ.ವೈ.ರಮೇಶ್‌ಬಾಬು ಮಾತನಾಡಿ, ಸದ್ಯ ನಿಯೋಜನೆ ಮೇರೆಗೆ ಸ್ತ್ರೀರೋಗ ತಜ್ಞರು ಕರ್ತವ್ಯದಲ್ಲಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕಾಯಂ ಸ್ತ್ರೀರೋಗ ತಜ್ಞರ ನೇಮಕಕ್ಕೆ ಮುಂದಾಗಿದ್ದೇವೆ. ನೇಮಕಕ್ಕೆ ಸ್ತ್ರೀರೋಗ ತಜ್ಞರು ತಕ್ಷಣಕ್ಕೆ ದೊರಕುತ್ತಿಲ್ಲ ಎಂದು ತಿಳಿಸಿದರು.
ಕಂಪ್ಲಿ ಅಭಿವೃದ್ಧಿಗಾಗಿ ಯುವಜನರ ವೇದಿಕೆ, ಟ್ರೇಡ್ ಯೂನಿಯನ್ ಕೋ-ಆರ್ಡಿನೇಷನ್ ಸೆಂಟರ್, ಕರ್ನಾಟಕ ರಾಜ್ಯ ಡಾ.ಭೀಮ್‌ರಾವ್ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿಕಾರರ ಸಂಘ, ಡಿಎಸ್‌ಎಸ್(ಬುದ್ಧ, ಬಸವ, ಅಂಬೇಡ್ಕರ್), ಕರ್ನಾಟಕ ಜನಶಕ್ತಿ, ರಾಷ್ಟ್ರೀಯ ಕಿಸಾನ್ ಜಾಗೃತಿ ವಿಕಾಸ ಸಂಘಗಳ ಪದಾಧಿಕಾರಿಗಳಾದ ಕರಿಯಪ್ಪ ಗುಡಿಮನಿ, ರವಿ ಮಣ್ಣೂರು, ಕೆ.ಲಕ್ಷ್ಮಣ, ಪಿ.ಯುಗಂಧರನಾಯ್ಡು, ಟಿ.ಎಚ್.ಎಂ.ರಾಜಕುಮಾರ್ ಇತರರಿದ್ದರು.