ಸಣಾಪುರದಲ್ಲಿ ಭಾನುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ನೂತನ ದಂಪತಿಗಳನ್ನು ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು ಹರಸಿದರು.
ಕಂಪ್ಲಿ: ಫ್ಯಾಮಿಲಿ ಪ್ಲಾನಿಂಗ್ (ಕುಟುಂಬ ಯೋಜನೆ) ಕೈಬಿಟ್ಟು ನೂತನ ದಂಪತಿಗಳು ನಾಲ್ಕು ಮಕ್ಕಳನ್ನು ಪಡೆಯುವತ್ತ ಮುಂದಾಗಲಿ ಎಂದು ಹೆಬ್ಬಾಳ ಬೃಹನ್ಮಠದ ಡಾ. ನಾಗಭೂಷಣ ಶಿವಾಚಾರ್ಯರು ಹೇಳಿದರು.
ಚಿಕ್ಕೇನಕೊಪ್ಪ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ತಾಲೂಕಿನ ನಂ.3 ಸಣಾಪುರದಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮಜಾಗೃತಿ ಸಮಾರಂಭ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೂಗಳು ಅಲ್ಪಸಂಖ್ಯಾತರಾಗುವುದನ್ನೂ, ಅಲ್ಪಸಂಖ್ಯಾತರು ಬಹುಸಂಖ್ಯಾತರಾಗುವುದನ್ನೂ ತಪ್ಪಿಸಲು ಹಿಂದೂ ದಂಪತಿಗಳು ನಾಲ್ಕು ಮಕ್ಕಳನ್ನು ಪಡೆಯುವುದು ಅನಿವಾರ್ಯ ಎಂದು ಹೇಳಿದರು.
ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು, ಅಜ್ಞಾನದಿಂದ ನಡೆಯುವ ಬಾಲ್ಯವಿವಾಹಗಳು, ಗುರು-ಹಿರಿಯರ ಅಣತಿಯನ್ನು ಮೀರಿ ನಡೆಯುವ ಪ್ರೇಮವಿವಾಹಗಳು ಹಾಗೂ ಅವುಗಳಿಂದ ಉಂಟಾಗುವ ವಿಚ್ಛೇದನಗಳು ಆತಂಕಕಾರಿ ಬೆಳವಣಿಗೆಗಳಾಗಿವೆ. ಯಾವುದೇ ಆಕರ್ಷಣೆಗೆ ಒಳಗಾಗಿ ನಡೆಯುವ ಪ್ರೇಮವಿವಾಹಗಳಲ್ಲಿ ವಧುಗಳು ಬಲಿಪಶುಗಳಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಗುರು-ಹಿರಿಯರ ಸಮ್ಮುಖದಲ್ಲಿ ನಡೆಯುವ ವಿವಾಹಗಳು ಶ್ರೇಷ್ಠವಾಗಿದ್ದು, ಭದ್ರ ಹಾಗೂ ಸುಸ್ಥಿರ ಜೀವನಕ್ಕೆ ದಾರಿ ಮಾಡಿಕೊಡುತ್ತವೆ. ಆರ್ಥಿಕವಾಗಿ ಹಿಂದುಳಿದವರಿಗೆ ಸಾಮೂಹಿಕ ವಿವಾಹಗಳು ವರದಾನ ಎಂದು ಅಭಿಪ್ರಾಯಪಟ್ಟರು.
ಇದಕ್ಕೂ ಮೊದಲು ಗ್ರಾಮದಲ್ಲಿ ಚಿಕ್ಕೇನಕೊಪ್ಪ ಚನ್ನವೀರ ಶರಣರ ಭಾವಚಿತ್ರ ಮೆರವಣಿಗೆ ನಡೆಯಿತು. ಸಾಮೂಹಿಕ ವಿವಾಹದಲ್ಲಿ ಐದು ಜೋಡಿ ದಂಪತಿಗಳು ವಿವಾಹಬಂಧನಕ್ಕೆ ಒಳಗಾದರು. ವೀರಭದ್ರೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಪಿ. ಮೂಕಯ್ಯಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಮುಷ್ಟೂರಿನ ಹಿರೇಮಠದ ಈಶ್ವರಯ್ಯತಾತ, ಜಿ. ಈಶಣ್ಣ, ಮರಿಶಾಂತ ಮುಷ್ಟೂರು, ಚನ್ನಪ್ಪ, ಕನಕಗಿರಿ ಬಸವರಾಜ, ಜಿ. ಕುಮಾರಸ್ವಾಮಿ, ಎಂ. ವೀರೇಶ್ ಪಾಟೀಲ್, ಎ. ನಾಗರಾಜ, ವೈ. ಮಹಾಂತೇಶ, ಟಿ. ಶರಣಪ್ಪ, ಯು. ಅರುಣಕುಮಾರ್, ಬಳೆ ಮಲ್ಲಿಕಾರ್ಜುನ, ಕೆ. ಬಸವರಾಜ, ವಿ. ಪಂಪನಗೌಡ, ಕೆ. ಚನ್ನಪ್ಪ, ಕೆ. ಭೀಮಣ್ಣ, ವೆಂಕಟರಾಮರಾಜು, ವೈ. ರಮಣಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.