ಬಳ್ಳಾರಿಯ ವೀರನಗೌಡ ಕಾಲನಿಯಲ್ಲಿ ಬೃಹತ್ ಮರವೊಂದು ಸ್ಕೂಟಿ ಮೇಲೆ ಬಿದ್ದು ಜಖಂಗೊಂಡಿದೆ.
- ಕಾಲನಿಗಳಲ್ಲಿನ ಮರಗಳು ರಸ್ತೆಗೆ ಉರುಳಿವೆ
- ರಸ್ತೆಗಳೆಲ್ಲವೂ ಸಂಪೂರ್ಣ ಜಲಾವೃತಗೊಂಡವು
ಬಳ್ಳಾರಿ ; ನಗರ ಹಾಗೂ ಗ್ರಾಮೀಣ ಪ್ರದೇಶದಾದ್ಯಂತ ಮಂಗಳವಾರ ಮಧ್ಯಾಹ್ನ ಏಕಾಏಕಿ ಬಾರಿ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಮಳೆ ಸುರಿಯಿತು. ಕಳೆದ ಎರಡು ದಿನಗಳಿಂದ ಜಿಲ್ಲಾದ್ಯಂತ ವಿಪರೀತ ಬಿಸಿಲು ದಾಖಲಾಗಿತ್ತು. ಆದರೆ ಮಂಗಳವಾರ ಮಧ್ಯಾಹ್ನವಾಗುತ್ತಲೇ ವಾತಾವರಣ ಸಂಪೂರ್ಣ ಬದಲಾಗಿ, ಕತ್ತಲು ಆವರಿಸಿತು. ಭೀಕರ ಗುಡುಗು ಮತ್ತು ಸತತ ಸಿಡಿಲಿನ ಸದ್ದಿಗೆ ಸಾರ್ವಜನಿಕರು ಕೆಲಕಾಲ ಬೆಚ್ಚಿಬಿದ್ದರು. ಬಿರುಗಾಳಿಯ ತೀವ್ರತೆಗೆ ನಗರದ ನಾನಾ ಕಾಲನಿಗಳಲ್ಲಿನ ಮರಗಳು ರಸ್ತೆಗೆ ಉರುಳಿವೆ.
ನಗರದ ಪ್ರಮುಖ ರಸ್ತೆಗಳೆಲ್ಲವೂ ಸಂಪೂರ್ಣ ಜಲಾವೃತಗೊಂಡವು. ಪ್ರಮುಖವಾಗಿ ನಗರದ ದುರ್ಗಮ್ಮ ದೇವಸ್ಥಾನದ ರಸ್ತೆ, ಎಸ್.ಎನ್. ಪೇಟೆ ಹಾಗೂ ಕ್ರೀಡಾಂಗಣ ರಸ್ತೆಯ ರೈಲ್ವೆ ಅಂಡರ್ ಬ್ರಿಡ್ಜ್‌ಗಳಲ್ಲಿ (ಕೆಳಸೇತುವೆ) ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅಂಡರ್ ಬ್ರಿಡ್ಜ್‌ಗಳಲ್ಲಿ ನೀರು ತುಂಬಿದ್ದರಿಂದ ಆ ಮಾರ್ಗವಾಗಿ ಸಂಚರಿಸಬೇಕಾಗಿದ್ದ ವಾಹನ ಸವಾರರು ಪರದಾಡಿದರು.
ಏಕಾಏಕಿ ಸುರಿದ ಮಳೆಯಿಂದಾಗಿ ಮಾರುಕಟ್ಟೆ, ಕಚೇರಿ ಸೇರಿದಂತೆ ನಾನಾ ಕಡೆಗಳಿಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಆಶ್ರಯ ಪಡೆಯಲು ಜಾಗವಿಲ್ಲದೆ ಹೈರಾಣಾದರು. ಮಳೆ ಮತ್ತು ಮರಗಳು ಉರುಳಿದ ಪರಿಣಾಮ ನಗರದ ಪ್ರಮುಖ ವೃತ್ತಗಳಲ್ಲಿ ಕೆಲಕಾಲ ತೀವ್ರ ಸಂಚಾರ ಸಿಕ್ಕು ಉಂಟಾಗಿತ್ತು. ಒಟ್ಟಾರೆಯಾಗಿ, ಈ ಮಳೆ ಬಿಸಿಲಿನಿಂದ ಕಂಗಾಲಾಗಿದ್ದ ಜನರಿಗೆ ತಾತ್ಕಾಲಿಕ ತಂಪು ನೀಡಿದರೂ, ನಗರದ ಮೂಲಸೌಕರ್ಯದ ಕೊರತೆ ಮತ್ತೊಮ್ಮೆ ಎತ್ತಿ ತೋರಿಸುವಂತೆ ಮಾಡಿತು.