ಸಿರಗುಪ್ಪದ ಟಿ.ಎಸ್.ಎಚ್.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾದಕ ವಸ್ತುಗಳ ಸೇವನೆ ನಿಷೇಧ ಜಾಗೃತಿ ಹಾಗೂ ಭಯೋತ್ಪಾದನಾ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಅಬಕಾರಿ ಸಿಪಿಐ ಎ.ಜಿ.ಅಂಬಣ್ಣ ಉದ್ಘಾಟಿಸಿದರು. ಹಿರಿಯ ಪ್ರಾಧ್ಯಪಕ ಕೃಷ್ಣಪ್ಪ, ಅಬಕಾರಿ ಮುಖ್ಯ ಪೇದೆ ಅಕ್ಬರ್‌ಅಲಿ, ಉಪನ್ಯಾಸಕ ಡಾ.ಕೆ.ಎಂ.ಚಂದ್ರಕಾಂತ್ ಇತರರಿದ್ದರು.
ಸಿರಗುಪ್ಪ: ಮಾದಕ ವಸ್ತು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ದುಶ್ಚಟದಿಂದ ಪ್ರತಿಯೊಬ್ಬರೂ ದೂರವಿರಬೇಕೆಂದು ಅಬಕಾರಿ ಸಿಪಿಐ ಎ.ಜಿ.ಅಂಬಣ್ಣ ಹೇಳಿದರು.
ಪಟ್ಟಣದ ಟಿ.ಎಸ್.ಎಚ್.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಎ ಮತ್ತು ಬಿ ಘಟಕ, ಅಬಕಾರಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ಸೇವನೆ ನಿಷೇಧ ಜಾಗೃತಿ ಹಾಗೂ ಭಯೋತ್ಪಾದನಾ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 1985ರ ಮಾದಕ ವಸ್ತುಗಳ ನಿಷೇಧ ಕಾಯ್ದೆಯನ್ವಯ ಮಾದಕ ವಸ್ತಗಳನ್ನು ಬೆಳೆಸುವುದು. ಮಾರಾಟ ಮಾಡುವುದು, ಸೇವಿಸುವುದು ಮತ್ತು ಸಾಗಿಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ ಎಂದರು.
ಮಾದಕ ವಸ್ತುಗಳ ಸೇವನೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸಂಪೂರ್ಣ ಹಾಳು ಮಾಡುತ್ತದೆ. ಇದರಿಂದ ದೂರವಿದ್ದು, ಉತ್ತಮ ಜೀವನಶೈಲಿ, ಶಿಕ್ಷಣ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ನಮ್ಮೆಲ್ಲರ ಆದ್ಯತೆಯಾಗಬೇಕು. ಸಮಾಜಘಾತುಕ ಚಟುವಟಿಕೆಯಾದ ಭಯೋತ್ಪಾದನೆಯ ಕಾರ್ಯಕ್ಕೂ ಕೂಡ ಪರೋಕ್ಷ ಪ್ರೇರಣೆ ನೀಡುವುದರಿಂದ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ಅಂತರ ಕಾಯ್ದುಕೊಂಡು, ಬೌದ್ಧಿಕ, ದೈಹಿಕವಾಗಿ ಸ್ವಾಸ್ಥೃ ಕಾಪಾಡಿಕೊಂಡು ತಮ್ಮ ಭವಿಷ್ಯ ರೂಪಿಕೊಳ್ಳಬೇಕೆಂದರು.
ಪ್ರಾಧ್ಯಾಪಕ ರಾಮಣ್ಣ ಪೂಜಾರಿ, ಭಯೋತ್ಪಾದನೆ ಮತ್ತು ಮಾದಕ ವಸ್ತುಗಳ ನಿಯಂತ್ರಣದ ಪ್ರತಿಜ್ಞಾವಿಧಿ ಬೋಧಿಸಿದರು. ಎನ್ನೆಸ್ಸೆಸ್-ಎ ಘಟಕಾಧಿಕಾರಿ ಡಾ.ಕೆ.ಎಂ.ಚಂದ್ರಕಾಂತ, ಬಿ-ಘಟಕಾಧಿಕಾರಿ ಬಕಾಡೆ ಪಂಪಾಪತಿ, ಪ್ರಾಧ್ಯಾಪಕರಾದ ಡಾ.ಶಾಲಿನಿ ಎ., ಪ್ರಶಾಂತಬಾಬು ಟಿ.ಎಸ್., ಸುರೇಶ, ಡಾ.ರಾಜೇಂದ್ರ, ರೇಣುಕಾ, ಮಮತಾ ಇದ್ದರು.