ದೇವಸಮುದ್ರ ಕ್ರಾಸ್‌ನಲ್ಲಿ ಗೋಶಾಲೆಯನ್ನು ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಉದ್ಘಾಟಿಸಿದರು. ಪ್ರಮುಖರಾದ ಕೆ.ಎಂ.ಚನ್ನಮಲ್ಲಯ್ಯಶಾಸ್ತ್ರಿ, ಕೆ.ಎಂ.ಬಸವರಾಜಶಾಸ್ತ್ರಿ, ವಾಮದೇವ ಶಿವಾಚಾರ್ಯರು, ಎಂ.ಸುಧೀರ್, ಗೊಗ್ಗಚನ್ನಬಸವರಾಜ, ಎನ್.ಎಂ.ಪತ್ರಯ್ಯಸ್ವಾಮಿ ಇತರರಿದ್ದರು. 
ಬಳ್ಳಾರಿ

ದೇಶೀಯ ತಳಿ ಗೋವುಗಳಿಂದ ಸ್ವಾಸ್ಥ್ಯ

ಪ್ರಮುಖ ಮುಖ್ಯಾಂಶಗಳು

  • ಕಲ್ಯಾಣ ಚೌಕಿಮಠದಲ್ಲಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ ಪ್ರತಿಪಾದನೆ
  • ಪಂಚಗವ್ಯದಿಂದ ಮಾರಣಾಂತಿಕ ಕಾಯಿಲೆಗಳ ನಿವಾರಣೆ
ಕಂಪ್ಲಿ: ಸಮಾಜದ ಸ್ವಾಸ್ಥ್ಯ ಕಾಪಾಡಲು ಪ್ರತಿಯೊಬ್ಬರೂ ದೇಶೀಯ ತಳಿ ಆಕಳುಗಳನ್ನು ಪೋಷಿಸಬೇಕು ಎಂದು ಕೊಲ್ಹಾಪುರ ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಕರೆ ನೀಡಿದರು.
ದೇವಸಮುದ್ರ ಕ್ರಾಸ್ ಬಳಿ ಸೋಮವಾರ ಕಲ್ಯಾಣ ಚೌಕಿಮಠ ಕಾಮಧೇನು ಗೋಶಾಲಾ ಸೇವಾ ಟ್ರಸ್ಟ್‌ನ ಗೋಶಾಲೆ, ಕಲ್ಯಾಣ ಕೃಷಿ ಆಶ್ರಮ ಹಾಗೂ ಗುರುಕುಲ ಶಿಕ್ಷಣಕ್ಕೆ ಚಾಲನೆ ನೀಡಿ ಮಾತನಾಡಿದರು. ಭೂಮಿ, ನೀರು ಮತ್ತು ಜೀವಾಣುಗಳು ಸ್ಥಿರ ಹಾಗೂ ಆರೋಗ್ಯವಾಗಿರಲು ಪಂಚಮಾತೆಗಳಲ್ಲಿ ಒಂದಾದ ಆಕಳ ಸಾಕಣೆ ಅತ್ಯಗತ್ಯವಾಗಿದೆ. ಆರೋಗ್ಯ, ಧರ್ಮ, ಪರಿಸರ ಹಾಗೂ ದೇಶದ ಅರ್ಥಶಾಸ್ತ್ರದ ಬೆಳವಣಿಗೆಯಲ್ಲಿ ಗೋವು ಪ್ರಮುಖ ಪಾತ್ರ ವಹಿಸುತ್ತದೆ. ಅಗ್ನಿಹೋತ್ರದ ಪ್ರಭಾವದಿಂದಾಗಿ ಭೂಪಾಲ ಅನಿಲ ದುರಂತದ ಸಮಯದಲ್ಲಿ ನಾಲ್ಕು ಮನೆಗಳು ಪಾರಾಗಲು ಸಾಧ್ಯವಾಯಿತು. ಪಂಚಗವ್ಯ ಬಳಕೆಯಿಂದ ಕ್ಯಾನ್ಸರ್, ಎಚ್‌ಐವಿ ಅಂತಹ ಮಾರಣಾಂತಿಕ ಕಾಯಿಲೆಗಳನ್ನು ನಿವಾರಿಸಬಹುದು. ಭೂಮಿಯ ಪೊಳ್ಳುತನ ತಡೆಯಲು ಮತ್ತು ಅಂತರ್ಜಲ ಹೆಚ್ಚಳಕ್ಕೆ ಕಡ್ಡಾಯವಾಗಿ ಆಕಳ ಗೊಬ್ಬರ ಬಳಸಬೇಕು ಎಂದರು.
ಗೋಶಾಲೆಯ ಸಂಸ್ಥಾಪಕ ಕೆ.ಎಂ. ಬಸವರಾಜಶಾಸ್ತ್ರಿ ಮಾತನಾಡಿ, ದೇಶೀಯ ತಳಿಗಳ ಸಂರಕ್ಷಣೆ, ತಳಿ ಬಲವರ್ಧನೆ ಹಾಗೂ ಗೋ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಲು ಗೋಶಾಲೆ ಸ್ಥಾಪಿಸಲಾಗಿದೆ. ಸನಾತನ ಧರ್ಮ ರಕ್ಷಣೆಯ ಭಾಗವಾಗಿ ಇಲ್ಲಿ ಗುರುಕುಲ ಶಿಕ್ಷಣ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಎಸ್.ವಿ. ಪಾಟೀಲ್ ಗುಂಡೂರು ರಚಿಸಿದ ‘ಸಾರ್ಥಕದ ಹೆಜ್ಜೆಗಳು’ ಕೃತಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಂ. ಚನ್ನಮಲ್ಲಯ್ಯಶಾಸ್ತ್ರಿ ವಹಿಸಿದ್ದರು. ಎಮ್ಮಿಗನೂರು ವಾಮದೇವ ಶಿವಾಚಾರ್ಯರು, ವರರುದ್ರಮುನಿ ಶಿವಾಚಾರ್ಯರು, ಸಿದ್ಧಲಿಂಗ ಶಿವಾಚಾರ್ಯರು, ಬ್ರಹ್ಮಾನಂದ ಮಹಾಸ್ವಾಮೀಜಿ, ಕೇಶವಾನಂದ ಸ್ವಾಮೀಜಿ, ಕರುಣಾನಂದ ಸ್ವಾಮೀಜಿ, ಚಂದ್ರಯ್ಯಸ್ವಾಮಿ, ಶಾಸಕ ಜೆ.ಎನ್. ಗಣೇಶ, ಮಾಜಿ ಶಾಸಕ ಪರಣ್ಣ ಮನವಳ್ಳಿ, ಟಿ.ಎಂ. ಚಂದ್ರಶೇಖರಯ್ಯ, ಎಂ. ಸುಧೀರ್, ಗೊಗ್ಗ ಚನ್ನಬಸವರಾಜ, ಎನ್.ಎಂ.ಪತ್ರಯ್ಯಸ್ವಾಮಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.