ಹನಸಿ ಗ್ರಾಮದಲ್ಲಿ ವಂಚನೆಗೆ ಯತ್ನಿಸಿದ ಸಂಶಯಾಸ್ಪದ ವ್ಯಕ್ತಿಗಳನ್ನು ಸಾರ್ವಜನಿಕರು ತಡೆದು ವಿಚಾರಿಸುತ್ತಿರುವುದು.
ಹಗರಿಬೊಮ್ಮನಹಳ್ಳಿ: ಜ್ಯೋತಿಷ ಹಾಗೂ ಭವಿಷ್ಯ ಹೇಳುವುದಾಗಿ ಮನೆಮನೆಗೆ ಬರುವ ಅಪರಿಚಿತರ ಬಗ್ಗೆ ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಜ್ಯೋತಿಷ ಹೇಳುವ ನೆಪದಲ್ಲಿ ಮಹಿಳೆಯರನ್ನು ನಂಬಿಸಿ ವಂಚಿಸಲು ಯತ್ನಿಸಿದ ನಾಲ್ವರು ಸಂಶಯಾಸ್ಪದ ವ್ಯಕ್ತಿಗಳನ್ನು ಹಿಡಿದು ಗ್ರಾಮಸ್ಥರು ಥಳಿಸಿದ ಪ್ರಸಂಗ ತಾಲೂಕಿನ ಹನಸಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಒಟ್ಟು ನಾಲ್ವರು ವ್ಯಕ್ತಿಗಳು ಗ್ರಾಮದ ಮುಸ್ಲಿಂ ಬಡಾವಣೆಯನ್ನು ಕೇಂದ್ರವನ್ನಾಗಿಸಿಕೊಂಡಿದ್ದರು. ಪುರುಷರಿಲ್ಲದ ಸಮಯ ಗಮನಿಸಿ, ಮಹಿಳೆಯರನ್ನು ಮಾತ್ರ ಗುರಿಯಾಗಿಸಿಕೊಂಡು ಈ ತಂಡ ಕಾರ್ಯಪ್ರವೃತ್ತವಾಗಿತ್ತು. ಭವಿಷ್ಯದ ಆಸೆ ತೋರಿಸಿ ಈಗಾಗಲೇ ಕೆಲವರಿಂದ 500 ರಿಂದ 1000 ರೂ. ಪೀಕಿದ್ದ ಇವರ ಆಟ, ಬಡಾವಣೆಯ ನಿವಾಸಿ ಮೊಹಮದ್ ಸೋಯಲ್ ಎಂಬುವವರ ಸಮಯಪ್ರಜ್ಞೆಯಿಂದಾಗಿ ಬಯಲಾಗಿದೆ.
ಸೋಯಲ್ ಅವರು ನಾಲ್ವರಲ್ಲಿ ಇಬ್ಬರನ್ನು ತಡೆದು ವಿಚಾರಿಸಿದಾಗ ಇಡೀ ವಂಚನಾ ಜಾಲ ಬೆಳಕಿಗೆ ಬಂದಿದೆ. ಬಡಾವಣೆಯ ಗಲ್ಲಿಗಳಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಇವರು ಹಿಂದಿಯಲ್ಲಿ ಮಾತನಾಡಿಸಿ ಸಂಶಯಾಸ್ಪದವಾಗಿ ನಡೆದುಕೊಳ್ಳುತ್ತಿದ್ದರು. ಕೂಡಲೇ ಗ್ರಾಮದ ಯುವಕರು ಸೇರಿ ಇವರನ್ನು ತರಾಟೆಗೆ ತೆಗೆದುಕೊಂಡಾಗ, ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಯಾವಾಗ ಸಾರ್ವಜನಿಕರಿಂದ ಹೊಡೆತಗಳು ಬಿದ್ದವೋ ಆಗ ಅಸಲಿ ಮುಖವಾಡ ಕಳಚಿತು. ಹೊಡೆತಕ್ಕೆ ಹೆದರಿ ತಾವು ಮುಸ್ಲಿಮರು ಎಂದು ಮೊದಲು ಹೇಳಿಕೊಂಡರಾದರೂ, ಅವರ ಆಧಾರ್ ಕಾರ್ಡ್ ಪರಿಶೀಲಿಸಿದಾಗ ರಘು ಮತ್ತು ಅಜಯ್ ಎಂಬ ಹೆಸರುಗಳು ಇದ್ದವು.
ಕೂಡಲೇ ವಂಚಿಸಿದ್ದ ಹಣವನ್ನು ಮಹಿಳೆಯರಿಗೆ ಮರಳಿಸಿದ ಗ್ರಾಮಸ್ಥರು, ವಶದಲ್ಲಿದ್ದ ಇಬ್ಬರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಪೊಲೀಸ್ ಠಾಣೆಗೆ ಒಪ್ಪಿಸಲು ಮುಂದಾದಾಗ ಆ ಇಬ್ಬರು ದಾರಿಯಲ್ಲೇ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಅಪರಿಚಿತರು ಜ್ಯೋತಿಷದ ಹೆಸರಲ್ಲಿ ಬಂದರೆ ಜನರು ಜಾಗೃತರಾಗಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.