ಗುರು ಸಿದ್ದರಾಮೇಶ್ವರ ಸ್ವಾಮೀಜಿ ಲಿಂಗೈಕ್ಯ: ಯಶವಂತನಗರ ಶ್ರೀಮಠದಲ್ಲಿ ನೀರವ ಮೌನ, ಇಂದು ಅಂತ್ಯಕ್ರಿಯೆ! Guru Siddharameshwara Swamiji 
ಬಳ್ಳಾರಿ

ಗುರು ಸಿದ್ದರಾಮೇಶ್ವರ ಸ್ವಾಮೀಜಿ ಲಿಂಗೈಕ್ಯ: ಯಶವಂತನಗರ ಶ್ರೀಮಠದಲ್ಲಿ ನೀರವ ಮೌನ, ಇಂದು ಅಂತ್ಯಕ್ರಿಯೆ! Guru Siddharameshwara Swamiji

ಪ್ರಮುಖ ಮುಖ್ಯಾಂಶಗಳು

  • ಗುರು ಸಿದ್ದರಾಮೇಶ್ವರ ಮಠದ ಪೀಠಾಧಿಪತಿ ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮೀಜಿ ಲಿಂಗೈಕ್ಯ
  • ಶುಕ್ರವಾರ ನಸುಕಿನ ಜಾವ 1.30ಕ್ಕೆ ಗುರು ಸಿದ್ದರಾಮೇಶ್ವರ ಸ್ವಾಮೀಜಿ ಲಿಂಗೈಕ್ಯರಾದರು
  • ಮಠದಲ್ಲಿ ನೀರವ ಮೌನ ಆವರಿಸಿದ್ದು ಶನಿವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ
ಸಂಡೂರು (ಬಳ್ಳಾರಿ): ಯಶವಂತನಗರದ ಗುರು ಸಿದ್ದರಾಮೇಶ್ವರ ಮಠದ ಪೀಠಾಧಿಪತಿ ಶ್ರೀ ಗುರು ಸಿದ್ದರಾಮೇಶ್ವರ ಸ್ವಾಮೀಜಿ ( Guru Siddharameshwara Swamiji ) ಶುಕ್ರವಾರ ನಸುಕಿನ ಜಾವ 1.30ಕ್ಕೆ ಲಿಂಗೈಕ್ಯರಾದರು. ಶನಿವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ. ಅವರಿಗೆ 48 ವರ್ಷ ವಯಸ್ಸಾಗಿತ್ತು.
ಶ್ರೀಗಳ ಪೂರ್ವಾಶ್ರಮದ ಹೆಸರು ಗಂಗಾಧರ ದೇವರು (ಗಂಗಾಧರಯ್ಯ). ಇವರು 1978ರ ನ.7ರಂದು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ವಿಠಲಾಪುರದಲ್ಲಿ ಶಿವಯ್ಯ ಹಿರೇಮಠ ಹಾಗೂ ಈರಮ್ಮ ದಂಪತಿ ಪುತ್ರನಾಗಿ ಜನಿಸಿದರು. ಸ್ವಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಹಾವೇರಿ ಜಿಲ್ಲೆಯ ಸಿಂದಗಿ ಮಠದಲ್ಲಿ ಸಂಸ್ಕೃತ ಪೌರೋಹಿತ್ಯ ಹಾಗೂ ಜ್ಯೋತಿಷ ಜ್ಞಾನ ಅಭ್ಯಾಸ ಮಾಡಿದರು. ಬಳಿಕ ಗದಗ ತೋಂಟದಾರ್ಯ ಮಠ ಮತ್ತು ಸಿಂದಗಿ ಪಾಠಶಾಲೆಯಲ್ಲಿ ಸಹಸ್ರಾರು ಶಿಷ್ಯವೃಂದಕ್ಕೆ ಅಕ್ಷರಾಭ್ಯಾಸ ಹಾಗೂ ಸಂಸ್ಕೃತ ಬೋಧನೆ ಮಾಡಿದ್ದರು.
ಕನ್ನಡದ ಕುಲಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಅಪ್ಪಣೆಯ ಮೇರೆಗೆ 2013ರ ಮೇ 24ರಂದು ಗುರು ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದ ಜವಾಬ್ದಾರಿ ವಹಿಸಿಕೊಂಡರು. ಇವರ ಕ್ರಿಯಾಶೀಲತೆಯಿಂದ ಭಕ್ತರಲ್ಲಿ ಹೊಸ ಸಂಚಲನ ಉಂಟಾಗಿತ್ತು. ಹಗಲಿರುಳೆನ್ನದೆ ಭಕ್ತರನ್ನು ಒಂದುಗೂಡಿಸಿಕೊಂಡು ಮಠದ ಜೀರ್ಣೋದ್ಧಾರ ಪ್ರಕ್ರಿಯೆಗೆ ವೇಗದ ಚಾಲನೆ ನೀಡಿದ್ದರು.
ಪೂಜ್ಯರ ನೇತೃತ್ವದಲ್ಲಿ ಶಿಲಾಮಂಟಪ ಸ್ಥಾಪನೆ, ಅನ್ನದಾಸೋಹ, ಪುರಾಣ ಪ್ರವಚನ, ಕಲ್ಯಾಣ ಮಂಟಪ ನಿರ್ಮಾಣ, ಮಹಾದ್ವಾರದ ಬಾಗಿಲು ಅಡಿಪಾಯ ಕಾರ್ಯಗಳು ನಡೆದಿದ್ದವು. ಮೂರು ತಿಂಗಳಿಗೊಮ್ಮೆ ಶಿವಾನುಭವ ಗೋಷ್ಠಿ, ವರ್ಷಕ್ಕೊಮ್ಮೆ ದೇವಿ ಪುರಾಣ ಪ್ರವಚನ ಹಾಗೂ ಪ್ರತಿ ತಿಂಗಳ ಅಮಾವಾಸ್ಯೆಯಂದು ಮೀನುಕೊಂಡದ ಗದ್ದುಗೆಯೊಂದಿಗೆ ಎರಡು ಕಡೆ ವಿಶೇಷ ಕಾರ್ತಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಯಶವಂತನಗರದ ಪ್ರತಿ ಗ್ರಾಮದ ಮನೆಗೂ ಭೇಟಿ ನೀಡಿ ಆಶೀರ್ವದಿಸಿದ್ದ ಶ್ರೀಗಳು, ಸರ್ವ ಸಮಾಜದ ಪ್ರತಿ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಿದ್ದರು. ಸಂಡೂರಿನ ಪ್ರಭುಸ್ವಾಮೀಜಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಶ್ರೀಗಳ ಅಗಲಿಕೆ ಭಕ್ತರ ಹೃದಯದಲ್ಲಿ ತುಂಬಲಾರದ ನಷ್ಟ ಉಂಟುಮಾಡಿದೆ.