ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕೂಡ್ಲಿಗಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪೂರ್ವಭಾವಿ ಸಭೆ ನಡೆಯಿತು. ಮಹಾಸಭಾ ತಾಲೂಕು ಅಧ್ಯಕ್ಷ ಜಿ.ಸುನೀಲ್ ಗೌಡ್ರು, ತಾಲೂಕು ಕಾರ್ಯದರ್ಶಿ ಜಿ.ಎಸ್.ಗಿರೀಶ, ಪ್ರಮುಖರಾದ ಎಂ.ಗುರುಸಿದ್ಧನಗೌಡ್ರು, ನಂದಿ ಬಸವರಾಜ, ಸಿಡೇಗಲ್ಲು ಬಸವರಾಜ, ಬ್ಯಾಳಿ ಶಿವಪ್ರಸಾದ ಗೌಡ, ಹಡಗಲಿ ವೀರಭದ್ರಪ್ಪ ಇದ್ದರು.
- ಜಿ.ಸುನೀಲ್ ಗೌಡ್ರು ಮಾಹಿತಿ
- ಕೂಡ್ಲಿಗಿ ವೀರಶೈವ ಲಿಂಗಾಯತ ಮಹಾಸಭಾ ಪೂರ್ವಭಾವಿ ಸಭೆ
ಕೂಡ್ಲಿಗಿ: ತಾಲೂಕಿನ ವೀರಶೈವ ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ ಅವರಿಗೆ ಜೂ.21ರಂದು ಸನ್ಮಾನ ನೆರವೇರಿಸಲಾಗುವುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಜಿ.ಸುನೀಲ್ ಗೌಡ್ರು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂದು ಬೆಳಗ್ಗೆ 11ಕ್ಕೆ ಪಟ್ಟಣದ ಶ್ರೀ ಚಂದ್ರಶೇಖರ ಅಜಾದ್ ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ವಹಿಸಲಿದ್ದು, ಶಾಸಕ ಡಾ.ಎನ್.ಟಿ.ಶ್ರೀನಿವಾಸ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ ಎಂದರು.
ಪ್ರಸಕ್ತ ಸಾಲಿನಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ನೆರವೇರಿಸಲಾಗುವುದು. ಸಹಕಾರ ರತ್ನ ಹಾಗೂ ವಿಜಯವಾಣಿಯ ‘ವಿಜಯರತ್ನ’ ಪ್ರಶಸ್ತಿಗೆ ಭಾಜನರಾಗಿರುವ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಮಹಾಸಭಾ ಸದಸ್ಯ ಕೆ.ಎಂ.ವೀರೇಶ ಮಾತನಾಡಿ, ಪ್ರತಿಭಾವಂತ ಪದವೀಧರ ಹಾಗೂ ತಾಂತ್ರಿಕ ವಿದ್ಯಾರ್ಥಿಗಳನ್ನೂ ಪರಿಗಣಿಸುವಂತೆ ಕೋರಿದರು. ಮಹಾಸಭಾ ಹಿರಿಯ ಸದಸ್ಯ ಎಂ. ಗುರುಸಿದ್ಧನಗೌಡ್ರು, ತಾಲೂಕು ಕಾರ್ಯದರ್ಶಿ ಜಿ.ಎಸ್.ಗಿರೀಶ, ಸದಸ್ಯರಾದ ಸಿಡೇಗಲ್ಲು ಬಸವರಾಜ, ನಂದಿ ಬಸವರಾಜ, ಕಲಾವಿದ ಬ್ಯಾಳಿ ಶಿವಪ್ರಸಾದ ಗೌಡ, ಹಡಗಲಿ ವೀರಭದ್ರಪ್ಪ, ಎ.ಎಂ.ಸೋಮಶೇಖರಯ್ಯ, ರಂಗಭೂಮಿ ಕಲಾವಿದ ಬಣಕಾರ ಮೂಗಪ್ಪ, ಮಠಪತಿ ಮಂಜುನಾಥ ಇದ್ದರು.