ಸಂಡೂರು ತಾಪಂ ಆವರಣದಲ್ಲಿ ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಕಚೇರಿ ಉದ್ಘಾಟನೆ ಹಾಗೂ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಶಾಸಕಿ ಅನ್ನಪೂರ್ಣ ತುಕಾರಾಮ್ ಚಾಲನೆ ನೀಡಿದರು. ಎಂಎಂಎಲ್ ಉಪಾಧ್ಯಕ್ಷ ಎಚ್.ಲಕ್ಷ್ಮಣ, ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ನೂರುದ್ದೀನ್, ವಾಡಾ ಅಧ್ಯಕ್ಷ ಅಕ್ಷಯ ಲಾಡ್ ಇತರರಿದ್ದರು.
- ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ
2.98 ಲಕ್ಷ ಜನರಿಗೆ ಗ್ಯಾರಂಟಿ ಲಾಭ
ಸಂಡೂರು: ರಾಜ್ಯ ಸರ್ಕಾರ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಲು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ವರ್ಷಕ್ಕೆ 56 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ ಎಂದು ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿದಾನಂದಪ್ಪ ಹೇಳಿದರು.
ನಗರದ ತಾಪಂ ಆವರಣದಲ್ಲಿ ಸೋಮವಾರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಕಚೇರಿ ಉದ್ಘಾಟನೆ ಹಾಗೂ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಳ್ಳಾರಿ ಜಿಲ್ಲೆಯಲ್ಲಿ 2.98 ಲಕ್ಷ ಜನರಿಗೆ ಯೋಜನೆ ತಲುಪುತ್ತಿದೆ. 50,767 ಮಹಿಳೆಯರಿಗೆ ಗೃಹಲಕ್ಷಿ ಯೋಜನೆ ಹಣ ಬರುತ್ತಿದ್ದು, ಶೇ.97 ಸಾಧನೆಯಾಗಿದೆ ಎಂದು ತಿಳಿಸಿದರು.
ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಪಾವತಿಸುವ ತಾಲೂಕಿನ 617 ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ಹೊರಗುಳಿದಿದ್ದಾರೆ. ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ ಸೌಲಭ್ಯ ಇರುವುದರಿಂದ ಮಗಳನ್ನು ತವರಿಗೆ ಕರೆತರಲು ಪಾಲಕರಿಗೆ ಅನುಕೂಲವಾಗಿದೆ. ಈ ಮೂಲಕ ಸಂಬಂಧಗಳನ್ನು ಬೆಸೆಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಬಿಜೆಪಿಯಂತೆ ಜಾತಿಗಳ ನಡುವೆ ಕಲಹ ಸೃಷ್ಟಿಸುವ ಕೆಲಸ ಮಾಡುವುದಿಲ್ಲ ಎಂದರು.
ಶಾಸಕಿ ಅನ್ನಪೂರ್ಣ ತುಕಾರಾಮ್ ಮಾತನಾಡಿ, ದಿನಬಳಕೆ ಸಾಮಾಗ್ರಿಗಳನ್ನು ಖರೀದಿಸಲು ಮನೆಯ ಯಜಮಾನರನ್ನು ಅವಲಂಬಿಸಬೇಕಾಗಿದೆ ಎಂಬುದನ್ನು ಮನಗಂಡು ಸಿಎಂ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ದೇವಸ್ಥಾನದ ಆದಾಯ ಹೆಚ್ಚಳವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಚಿನ್ನದ ಬೆಲೆ 10 ಗ್ರಾಂಗೆ 50ರಿಂದ 60 ಸಾವಿರಕ್ಕೆ ಇಳಿಯಲಿದೆ ಎಂದರು.
ಎಂಎಂಎಲ್ ಉಪಾಧ್ಯಕ್ಷ ಎಚ್.ಲಕ್ಷ್ಮಣ, ವಾಡಾ ಅಧ್ಯಕ್ಷ ಅಕ್ಷಯ ಲಾಡ್, ಗ್ರಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ, ತಾಲೂಕು ಅಧ್ಯಕ್ಷ ನೂರುದ್ದೀನ್, ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ, ಬಿಇಒ ಡಾ.ಐ.ಆರ್.ಅಕ್ಕಿ, ಪುರಸಭೆ ಮಾಜಿ ಅಧ್ಯಕ್ಷ ಸಿರಾಜ್ ಹುಸೇನ್, ಪ್ರಮುಖರಾದ ಶ್ರೀಧರ್, ನಾಗರಾಜ, ರುದ್ರಗೌಡ, ಜ್ಯೋತಿ ನರಸಿಂಗಾಪುರ, ಪದ್ಮಾ ತೋರಣಗಲ್, ಕೆ.ಬಿ.ಹೊಸಗೇರಪ್ಪ, ಮಹೇಶ್ವರಪ್ಪ, ದಾದಾಪೀರ್ ಇತರರಿದ್ದರು.