ಬಳ್ಳಾರಿಯ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಶಾಸಕ ನಾರಾಭರತರೆಡ್ಡಿ ಉದ್ಘಾಟಿಸಿದರು. ಮೇಯರ್ ಪಿ.ಗಾದೆಪ್ಪ, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ, ಜಿಲ್ಲಾ ಗೊಲ್ಲರ ಸಂಘದ ಗೌರವಾಧ್ಯಕ್ಷ ಪಿ.ತಿಮ್ಮಪ್ಪ ಯಾದವ್, ಎಸಿ ಎಚ್.ಡಿ.ರಾಜೇಶ್, ತಹಸೀಲ್ದಾರ್ ಟಿ.ರೇಖಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಇದ್ದರು.
ಬಳ್ಳಾರಿ : ಗೊಲ್ಲರ ಸಮಾಜವು ಸದಾ ದಾನ-ಧರ್ಮ ಹಾಗೂ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಇಂತಹ ಸಮುದಾಯದ ಕೊಡುಗೆ ಪರಿಗಣಿಸಿ ರಾಜಕೀಯವಾಗಿಯೂ ಶಕ್ತಿ ತುಂಬಲಾಗಿದೆ ಎಂದು ಶಾಸಕ ನಾರಾ ಭರತರೆಡ್ಡಿ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮುದಾಯದ ಮುಖಂಡರು ರಾಜಕೀಯ ಮುನ್ನೆಲೆಗೆ ಬಂದಾಗ ಮಾತ್ರ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗಲು ಸಾಧ್ಯವಾಗಲಿದೆ. ಸಂಘದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 25 ಲಕ್ಷ ರೂ. ಅನುದಾನ ನೀಡಲಾಗುವುದು ಎಂದರು.
ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿ, ಜೀವನದಲ್ಲಿ ಶಾಶ್ವತವಾದ ಸುಖ- ದುಃಖ ಇರುವುದಿಲ್ಲ, ಬದಲಿಗೆ ಬದುಕಿನಲ್ಲಿ ದೊರೆಯುವುದೆಲ್ಲ ಕೇವಲ ಅನುಭವಗಳು ಮಾತ್ರ. ಜೀವನದಲ್ಲಿ ಏನೇ ಸಂಭವಿಸಿದರೂ ಅದು ಒಳ್ಳೆಯದಕ್ಕಾಗಿಯೇ ಆಗಿರುತ್ತದೆ. ಆಗುವುದೆಲ್ಲವೂ ಒಳ್ಳೆಯದಕ್ಕೇ ಎಂಬ ಸಕಾರಾತ್ಮಕ ಭಾವನೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕೃಷ್ಣನ ಬೋಧನೆಗಳು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಪ್ರತಿಯೊಬ್ಬರ ದೈನಂದಿನ ಬದುಕಿಗೂ ದಾರಿದೀಪವಾಗಬೇಕು ಎಂದು ಕರೆ ನೀಡಿದರು.
ಪಾಲಿಕೆ ಮೇಯರ್ ಪಿ.ಗಾದೆಪ್ಪ ಮಾತನಾಡಿ, ಶ್ರೀಕೃಷ್ಣ ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿರದೆ ಇಡೀ ಜಗತ್ತಿಗೆ ಮಾರ್ಗದರ್ಶನ ನೀಡಿದ ವಿಶ್ವಗುರು ಆಗಿದ್ದರು. ಯಾದವ ಸಂಘಕ್ಕೆ ಹಿಂದಿನ ವರ್ಷ ಸಮುದಾಯದವರ ಸಹಕಾರದಿಂದ ನಿವೇಶನ ಖರೀದಿಸಲಾಗಿದೆ. ಅಲ್ಲಿ ಸಮಾಜದ ಬಹುದಿನಗಳ ಬೇಡಿಕೆಯಾದ ಸಮುದಾಯ ಭವನ ಹಾಗೂ ಶ್ರೀಕೃಷ್ಣನ ದೇವಾಲಯ ನಿರ್ಮಾಣಕ್ಕೆ 2.5 ಕೋಟಿ ರೂ. ವೆಚ್ಚದ ನೀಲನಕ್ಷೆ ಹಾಗೂ ಅಗತ್ಯ ಪರವಾನಗಿಗಳನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವೈ.ಬಸವರಾಜ ತಂಡದ ಸಮೂಹ ನೃತ್ಯ ನೋಡುಗರ ಮನಸೆಳೆಯಿತು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು. ನಗರದಲ್ಲಿ ಶ್ರೀಕೃಷ್ಣ ಜಯಂತಿ ಅಂಗವಾಗಿ ಅದ್ದೂರಿ ಮೆರವಣಿಗೆ ನಡೆಯಿತು. ನಗರದ ಮುನ್ಸಿಪಾಲ್ ಕಾಲೇಜು ಆವರಣದಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು.