ಶಾಸಕ ಕೃಷ್ಣನಾಯ್ಕ  
ಬಳ್ಳಾರಿ

ಅತಿವೃಷ್ಟಿ ಪರಿಹಾರ ಬಿಡುಗಡೆಗೆ ಸರ್ಕಾರ ನಿರ್ಲಕ್ಷೃ

ಹಗರಿಬೊಮ್ಮನಹಳ್ಳಿ: ಅತಿವೃಷ್ಟಿಯಿಂದಾಗಿರುವ ಹಾನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇದುವರೆಗೆ ಬಿಡುಗಡೆ ಮಾಡಿಲ್ಲ. ಹೂವಿನಹಡಗಲಿ ಕ್ಷೇತ್ರಕ್ಕೆ 10 ಕೋಟಿ ರೂ. ಕೋರಿ ಕಳೆದ ವರ್ಷ ಕ್ರಿಯಾಯೋಜನೆ ತಯಾರಿಸಿ ಕಳಿಸಲಾಗಿತ್ತು ಎಂದು ಶಾಸಕ ಕೃಷ್ಣನಾಯ್ಕ ತಿಳಿಸಿದರು.
ಮೋರಗೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಮಗಾರಿಗೆ ಕ್ರಿಯಾಯೋಜನೆ ತಯಾರಾಗಿ ಅನುಮೋದನೆಯೂ ದೊರೆತಿದೆ. ಆದರೆ, ಟೆಂಡರ್ ಪ್ರಕ್ರಿಯೆಗೆ ಗುತ್ತಿಗೆದಾರರು ಮುಂದಾಗುತ್ತಿಲ್ಲ. ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಯಾಗದಿರುವುದು ಇದಕ್ಕೆ ಕಾರಣ. ರಾಜ್ಯ ಸರ್ಕಾರ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ದೂರಿದರು.
ಅಭಿವೃದ್ಧಿ ಹೊಂದಿದ ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಗ್ರಾಪಂಗೆ ಮೊದಲಿದ್ದ ಒಂದು ಕೋಟಿ ರೂ.ಯನ್ನು ವಿಬಿ ಜಿ ರಾಮ್ ಜಿ ಯೋಜನೆಯಡಿ ಎರಡರಿಂದ ಮೂರು ಕೋಟಿ ರೂ.ಗೆ ಹೆಚ್ಚಿಸಿ ರಾಜ್ಯ ಸರ್ಕಾರದ ಶೇ.40 ಅನುದಾನ ಪಡೆದು ಮಾದರಿ ಗ್ರಾಮಗಳನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ಅದೇ ಕಾಂಗ್ರೆಸ್ ಸರ್ಕಾರ ಯೋಜನೆಯನ್ನು ಟೀಕಿಸುತ್ತಾ, ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆದು ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.
ಗದ್ದಿಕೆರೆ ಗ್ರಾಮದಿಂದ ಮೋರಗೆರೆಯವರೆಗೆ ಮಾರ್ಚ್‌ನಲ್ಲಿ ಪಾದಯಾತ್ರೆ ನಡೆಸಿ ವಿಬಿ ಜಿ ರಾಮ್ ಜಿ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು ಎಂದು ಶಾಸಕ ಕೃಷ್ಣನಾಯ್ಕ ತಿಳಿಸಿದರು. ಜಿಪಂ ಮಾಜಿ ಸದಸ್ಯ ಶಾನಭೋಗರ ಗುರುಸಿದ್ದಪ್ಪ, ಪ್ರಮುಖರಾದ ಡಾ.ಬಾಳಪ್ಪ, ಉಮೇಶ, ಬೆಟ್ಟನಗೌಡ್ರು, ಜಯಪ್ಪ, ಜಿತೇಂದ್ರ, ವೆಂಕಟೇಶ, ಮೇಟಿ ಹುಲುಗೇಶ, ಬಸವನಗೌಡ ಇತರರಿದ್ದರು.