ಕುರುಗೋಡಿನಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸನ್ಮಾರ್ಗ ಗೆಳೆಯರ ಬಳಗದಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಉಚಿತ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
- ಸರ್ಕಾರಿ ಉದ್ಯೋಗ ಸ್ಥಿತಿವಂತರಿಗೆ ಮಾತ್ರ ಸೀಮಿತ
- ಡಿವೈಎಸ್ಪಿ ಪ್ರಸಾದ್ ಗೋಖಲೆ ಹೇಳಿಕೆ
ಕುರುಗೋಡು: ಉನ್ನತ ಸರ್ಕಾರಿ ಉದ್ಯೋಗ ಸ್ಥಿತಿವಂತರಿಗೆ ಮಾತ್ರ ಸೀಮಿತ ಎನ್ನುವ ಕಲ್ಪನೆಯಿಂದ ಹೊರಬರಬೇಕೆಂದು ತೋರಣಗಲ್ಲು ಡಿವೈಎಸ್ಪಿ ಪ್ರಸಾದ್ ಗೋಖಲೆ ಹೇಳಿದರು.
ಪಟ್ಟಣದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸನ್ಮಾರ್ಗ ಗೆಳೆಯರ ಬಳಗದಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಉಚಿತ ತರಬೇತಿ ಕಾರ್ಯಾಗಾರದಲ್ಲಿ ಮಂಗಳವಾರ ಮಾತನಾಡಿದರು. ಗ್ರಾಮೀಣ ಭಾಗದ ಯುವ ಸಮೂಹಕ್ಕಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಸ್ಪರ್ಧಾತ್ಮ ಪರೀಕ್ಷೆಗಳಿಗೆ ಮಾರ್ಗದರ್ಶನ ಶಿಬಿರ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಪಿಎಸ್‌ಐ ಸುಪ್ರಿತ್ ವಿರೂಪಾಕ್ಷಪ್ಪ ಮಾತನಾಡಿ, ಪೊಲೀಸ್ ಹುದ್ದೆಗೆ ತಯಾರಾಗುವ ಪ್ರತಿಯೊಬ್ಬರೂ ದಿನಪತ್ರಿಕೆಯಲ್ಲಿ ಪ್ರಕಟವಾಗುವ ಪ್ರಚಲಿತ ಘಟನೆಗಳೊಂದಿಗೆ ಅಗತ್ಯ ಪುಸ್ತಕಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಈ ಮೂಲಕ ನಿರ್ದಿಷ್ಟ ಗುರಿಯಡೆಗೆ ಸಾಗಬೇಕು ಎಂದರು.
ಖಾಸಗಿ ಕೋಚಿಂಗ್ ಸೆಂಟರ್ ನಿರ್ದೇಶಕ ರಾಧಕೃಷ್ಣ ಸಜ್ಜನ್ ಮಾತನಾಡಿ, ಗುರಿ, ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಸಾಧನೆಗಿರುವ ಮಾರ್ಗಗಳಾಗಿವೆ. ಜೀವನದಲ್ಲಿ ತಾಳ್ಮೆ ಪ್ರಮುಖವಾಗಿದೆ. ಜೀವನ ಶೈಲಿ ಬದಲಾವಣೆ, ಪೂರ್ವ ತಯಾರಿಯೊಂದಿಗೆ ಅಧ್ಯಯನ ಮಾಡಬೇಕು. ಸಮಯದ ಮಿತಿ ಹಾಕಿಕೊಳ್ಳದೆ ಅಧ್ಯಯನ ಮಾಡಬೇಕೆಂದು ಸಲಹೆ ನೀಡಿದರು.
ತಹಸೀಲ್ದಾರ್ ನರಸಪ್ಪ ಕೆಪಿಎಸ್ಸಿ ಹಾಗೂ ಪಿಎಸ್‌ಐ ಸುಪ್ರಿತ್ ವಿರೂಪಾಕ್ಷಪ್ಪ ಪಿಎಸ್‌ಐ ಪರೀಕ್ಷೆ ಕುರಿತು ಮಾಹಿತಿ ನೀಡಿದರು. ಶಾಸಕ ಜೆ ಎನ್ ಗಣೇಶ್, ಪ್ರಾಚಾರ್ಯೆ ಶಾಂತಲಾ, ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಉಪನ್ಯಾಸಕ ತಿಪ್ಪೇರುದ್ರ ಸಂಡೂರು, ಸನ್ಮಾರ್ಗ ಗೆಳೆಯರ ಬಳಗದ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ ಆಚಾರ್ ಇದ್ದರು.