ಬಳ್ಳಾರಿಯ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಮೇಯರ್ ಪಿ.ಗಾದೆಪ್ಪ ಉದ್ಘಾಟಿಸಿದರು. ಡಿಸಿ ನಾಗೇಂದ್ರ ಪ್ರಸಾದ್ ಕೆ., ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ, ಎಡಿಸಿ ಮಹಮ್ಮದ್ ಎನ್. ಜುಬೇರ್, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಇತರರಿದ್ದರು. ====
ಬಳ್ಳಾರಿ : ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿವೆ ಎಂದು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್ ಹೇಳಿದರು.
ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ಮಹಿಳೆಯರಿಗೆ ಪೂಜನೀಯ ಸ್ಥಾನವಿದೆ. ಸ್ವಾತಂತ್ರೃ ಪೂರ್ವದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ್ದ ತುಳುನಾಡಿನ ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅಂತಹ ವೀರ ಮಹಿಳೆಯರ ಧೈರ್ಯದ ಕಥೆಗಳನ್ನು ಸ್ಮರಿಸಬೇಕು ಎಂದರು.
ಡಿಸಿ ನಾಗೇಂದ್ರ ಪ್ರಸಾದ್ ಕೆ. ಮಾತನಾಡಿ, ಈ ವರ್ಷದ ಮಹಿಳಾ ದಿನಾಚರಣೆಯನ್ನು ಗಿವ್ ಟು ಗೇನ್’ (ಪಡೆಯುವುದಕ್ಕಾಗಿ ಕೊಡಿ) ಎಂಬ ವಿಶೇಷ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ ಎಂದರು.
ಸರ್ಕಾರದ ಸೌಲಭ್ಯಗಳು ಫಲಾನುಭವಿಗಳಿಗೆ ತಲುಪುವಲ್ಲಿ ವಿಳಂಬವಾಗುತ್ತಿದೆ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಅರ್ಜಿಗಾಗಿ ಕಾಯುವ ಬದಲು ಅಧಿಕಾರಿಗಳೆ ಚುರುಕಾಗಿ ಕಾರ್ಯನಿರ್ವಹಿಸಿ ಮಹಿಳೆಯರ ಮತ್ತು ಅಂಗವಿಕಲರಿದ್ದ ಸ್ಥಳಕ್ಕೆ ಹೋಗಿ ಸೌಲಭ್ಯಗಳನ್ನು ತಲುಪಿಸಬೇಕು ಎಂದರು.
ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಮಾತನಾಡಿ, ಒಬ್ಬ ಹುಡುಗನಿಗೆ ಶಿಕ್ಷಣ ನೀಡಿದರೆ ಅದು ಅವನಿಗೆ ಮಾತ್ರ ಸೀಮಿತ, ಆದರೆ ಒಬ್ಬ ಹೆಣ್ಣು ಮಗುವಿಗೆ ಶಿಕ್ಷಣ ನೀಡಿದರೆ ಅದು ಇಡೀ ಕುಟುಂಬ ಮತ್ತು ಸಮಾಜಕ್ಕೆ ನೀಡಿದಂತೆ ಎಂಬ ಪ್ರಸಿದ್ಧ ಮಾತಿನಂತೆ, ಪಾಲಕರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಪಾಲಿಕೆ ಮೇಯರ್ ಪಿ.ಗಾದೆಪ್ಪ ಮಾತನಾಡಿ, ಮಹಿಳೆಯರಲ್ಲಿರುವ ಸೌಮ್ಯತೆ, ಧೈರ್ಯ, ಪ್ರೀತಿ ಮತ್ತು ವಿಶ್ವಾಸ ಇಡೀ ಜಗತ್ತನ್ನೇ ಗೆಲ್ಲುವ ಶಕ್ತಿ ಹೊಂದಿದೆ. ಪುರುಷರು ಪಡೆಯುತ್ತಿರುವ ಸ್ಥಾನಮಾನ, ಗೌರವ ಮತ್ತು ಅಧಿಕಾರದ ಹಿಂದೆ ತಾಯಿ ಮತ್ತು ಪತ್ನಿಯ ಸಹಕಾರ ಅಡಗಿದೆ. ಒಂದು ರಾಜ್ಯ, ಗ್ರಾಮ, ಶಾಲೆ ಅಥವಾ ದೇಶದಲ್ಲಿ ನಿಜವಾದ ಬದಲಾವಣೆ ಆಗಬೇಕಾದರೆ ಅದು ಮಹಿಳೆಯರಿಂದ ಮಾತ್ರ ಸಾಧ್ಯ. ಅವರು ಮನಸ್ಸು ಮಾಡಿದರೆ ಯಾವುದೇ ಬದಲಾವಣೆ ಅಸಾಧ್ಯವಲ್ಲ ಎಂದು ಹೇಳಿದರು.
ಬಳಿಕ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.