ಬಳ್ಳಾರಿಯಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಸಚಿವ ಜಮೀರ್ ಅಹ್ಮದ್ ಉದ್ಘಾಟಿಸಿದರು. ಶಾಸಕರಾದ ಭರತ್‌ರೆಡ್ಡಿ, ಜೆ.ಎನ್.ಗಣೇಶ್, ಸಂಸದ ಈ.ತುಕಾರಾಮ್, ಭೋವಿ ಸಂಘದ ಜಿಲ್ಲಾಧ್ಯಕ್ಷ ವಿ.ರಾಮಾಂಜನೇಯ, ತಹಸೀಲ್ದಾರ್ ಟಿ.ರೇಖಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಇತರರಿದ್ದರು. 
ಬಳ್ಳಾರಿ

ಸಮುದಾಯ ಅಭಿವೃದ್ಧಿಗೆ ಸರ್ಕಾರ ಬದ್ಧ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಅಭಿವೃದ್ಧಿ
ಬಳ್ಳಾರಿ : ಸಿದ್ದರಾಮೇಶ್ವರರು ಭಕ್ತಿ, ಯೋಗ ಮತ್ತು ಸೇವೆಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿನ ಎಲ್ಲ ಹಿಂದುಳಿದ ವರ್ಗಗಳು, ಬಡವರು ಅಭಿವೃದ್ಧಿ ಹೊಂದಬೇಕು ಎಂಬುದೇ ಸರ್ಕಾರದ ಮುಖ್ಯ ಆಶಯವಾಗಿದೆ. ರಾಜ್ಯದ ಪ್ರತಿ ಸಮಾಜ, ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.
ಶಾಸಕ ನಾರಾ ಭರತ್‌ರೆಡ್ಡಿ ಮಾತನಾಡಿ, ಕಲ್ಲು ಹೊಡೆಯುವ ವೃತ್ತಿಯಿಂದಲೇ ಬದುಕು ಕಟ್ಟಿಕೊಂಡವರು ಭೋವಿ ಸಮಾಜದವರು. ಸಮಾಜದ ಅಭಿವೃದ್ಧಿಗೆ ಸದಾ ಬದ್ಧನಾಗಿದ್ದು, ನಗರದಲ್ಲಿ ಭೋವಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದರು.
ಸಂಸದ ಈ.ತುಕಾರಾಮ್ ಮಾತನಾಡಿ, ಒಬ್ಬ ಮನುಷ್ಯ ನಿರ್ದಿಷ್ಟ ಗುರಿ ಇಟ್ಟುಕೊಂಡು ಸತ್ಯ, ನ್ಯಾಯ ಪಾಲಿಸಿಕೊಂಡು ವಿಜಯೋತ್ಸವದೆಡೆಗೆ ಸಾಗಬೇಕು ಎಂಬುದನ್ನು ಬಿಂಬಿಸುವುದೇ ಜಯಂತಿ ಕಾರ್ಯಕ್ರಮಗಳ ಆಚರಣೆಯ ಮುಖ್ಯ ಉದ್ದೇಶವಾಗಿವೆ.
ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸುವುದೇ ಮುಖ್ಯ ಗುರಿಯಾಗಿಸಬೇಕು. ಕುರುಗೋಡು ಪಟ್ಟಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಭೋವಿ ಸಮಾಜದ ಸಮುದಾಯ ಭವನ ನಿರ್ಮಿಸಲಾಗುತ್ತಿದ್ದು, ಈಗಾಗಲೇ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರ ಅದ್ಧೂರಿ ಮೆರವಣಿಗೆ ನಡೆಯಿತು. ನಗರದ ಮುನ್ಸಿಪಾಲ್ ಕಾಲೇಜು ಮೈದಾನದಿಂದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಸಾಗಿಬಂದು ಸಂಪನ್ನಗೊಂಡಿತು.
===