ಬಳ್ಳಾರಿಯ ಕೋಲಚಲಂ ಕೌಂಪೌಂಡ್‌ನಲ್ಲಿನ ಔಷದ ಮಳಿಗೆಗಳು ಮುಚ್ಚಿ ಬಂದ್‌ಗೆ ಬೆಂಬಲ ನೀಡಲಾಗಿತ್ತು.
- ತುರ್ತು ಸೇವೆ ಯಥಾಸ್ಥಿತಿ
- ಪ್ರತಿಭಟನೆಗೆ ಸಂಪೂರ್ಣ ಬೆಂಬಲ
ಬಳ್ಳಾರಿ : ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ ಕರೆ ನೀಡಿದ್ದ ದೇಶವ್ಯಾಪಿ ಮೆಡಿಕಲ್ ಶಾಪ್ ಬಂದ್‌ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರ ಹಾಗೂ ಜಿಲ್ಲಾದ್ಯಂತ ಮೆಡಿಕಲ್ ಅಂಗಡಿಗಳು ಸ್ವಯಂಪ್ರೇರಿತವಾಗಿ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಸೂಚಿಸಿದವು. ಇದರಿಂದಾಗಿ ಸಾರ್ವಜನಿಕರು ಕೆಲ ಕಾಲ ಔಷಧ ಖರೀದಿಸಲು ಪರದಾಡುವಂತಾಯಿತು ಹಾಗೂ ಜನಜೀವನದಲ್ಲಿ ಸಣ್ಣಮಟ್ಟದ ತೊಂದರೆ ಕಾಣಿಸಿಕೊಂಡಿತು.
ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಹಾಗೂ ಆನ್‌ಲೈನ್ ಆ್ಯಪ್‌ಗಳ ಮೂಲಕ ಔಷಧ ಮಾರಾಟ ಗಣನೀಯವಾಗಿ ಹೆಚ್ಚುತ್ತಿರುವುದು ಸಣ್ಣ ಮತ್ತು ಮಧ್ಯಮ ಮಟ್ಟದ ಸಾಂಪ್ರದಾಯಿಕ ಔಷಧ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಯಾವುದೇ ಪಾರದರ್ಶಕತೆ ಇಲ್ಲದೆ, ರಿಯಾಯಿತಿಗಳ ಹೆಸರಿನಲ್ಲಿ ಆನ್‌ಲೈನ್ ಕಂಪನಿಗಳು ಗ್ರಾಹಕರನ್ನು ಸೆಳೆಯುತ್ತಿವೆ. ಇದರಿಂದಾಗಿ ವರ್ಷಗಳಿಂದ ನಂಬಿಕೊಂಡು ಬಂದಿರುವ ನಮ್ಮ ಜೀವನಾಧಾರಕ್ಕೆ ತೀವ್ರ ಹೊಡೆತ ಬಿದ್ದಿದೆ ಎಂಬುದಾಗಿ ಸ್ಥಳೀಯ ವ್ಯಾಪಾರಿಗಳು ಅಳಲು ತೋಡಿಕೊಂಡರು.
ಬಂದ್ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಕೇವಲ ಪ್ರಮುಖ ಆಸ್ಪತ್ರೆಗಳ ಆವರಣದಲ್ಲಿರುವ ತುರ್ತು ಔಷಧ ಮಳಿಗೆಗಳು ಮಾತ್ರ ಎಂದಿನಂತೆ ತೆರೆದಿದ್ದವು. ತುರ್ತು ಚಿಕಿತ್ಸೆ ಮತ್ತು ಅತ್ಯಗತ್ಯ ಸೇವೆಗಳಿಗೆ ಯಾವುದೇ ಅಡಚಣೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು ಎಂದು ವ್ಯಾಪಾರಿಗಳ ಸಂಘಟನೆ ಮುಖಂಡ ದೇವರಾಜ್ ತಿಳಿಸಿದರು. ಔಷಧ ಮಾರಾಟ ಪ್ರಕ್ರಿಯೆಯಲ್ಲಿ ಸರ್ಕಾರ ತಕ್ಷಣವೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಬೇಕು. ಇ-ಫಾರ್ಮಸಿ ಮಾರಾಟ ಜಾಲಕ್ಕೆ ಕಠಿಣ ನಿಯಂತ್ರಣ ಹೇರಬೇಕು. ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಯುತ್ತಿರುವ ಔಷಧ ಮಾರಾಟವನ್ನು ತಕ್ಷಣವೇ ಪತ್ತೆಹಚ್ಚಿ ನಿಲ್ಲಿಸಬೇಕು. ಔಷಧ ವಿತರಣಾ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದರು.