ಹಗರಿಬೊಮ್ಮನಹಳ್ಳಿ ಭಗೀರಥ ಭವನದಲ್ಲಿ ಹಮ್ಮಿಕೊಂಡಿದ್ದ ಭಗೀರಥ ಮಹರ್ಷಿ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶಾಸಕ ಕೆ.ನೇಮಿರಾಜ್‌ನಾಯ್ಕ, ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಶ್ರೀಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ತೋಂಟದಾರ್ಯ ಮಠದ ಬಾಚಿಗೊಂಡನಹಳ್ಳಿ ಶಾಖಾಮಠದ ಶಿವಮಾಂತ ಸ್ವಾಮೀಜಿ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರ್ಮಣ್ಣ ಇತರರಿದ್ದರು. 
ಬಳ್ಳಾರಿ

ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸಿ

ಶಾಮಸುಂದರ್ ಕೊಪ್ಪಳಕರ್

ಪ್ರಮುಖ ಮುಖ್ಯಾಂಶಗಳು

  • ಶಾಸಕ ನೇಮಿರಾಜ್‌ನಾಯ್ಕ ಹೇಳಿಕೆ
  • ಭಗೀರಥ ಜಯಂತ್ಯುತ್ಸವ ಉದ್ಘಾಟನೆ
ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಶ್ರೀಮಹರ್ಷಿ ಭಗೀರಥ ಜಯಂತ್ಯುತ್ಸವ ಗುರುವಾರ ಅದ್ದೂರಿಯಾಗಿ ನಡೆಯಿತು.
ಪಟ್ಟಣದ ಶ್ರೀಹಗರಿ ಆಂಜನೇಯ ಸ್ವಾಮಿ ದೇಗುಲದಿಂದ ಆರಂಭವಾದ ಭಗೀರಥ ಮಹರ್ಷಿ ಪೀಠಾಧೀಶ್ವರರಾದ ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿಗಳನ್ನು ರಥದಲ್ಲಿ, ವಿವಿಧ ವಾಧ್ಯಗಳೊಂದಿಗೆ ಭವ್ಯ ಮೆರವಣಿಗೆ ಮೂಲಕ ವೇದಿಕೆ ಕರೆತರಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ನೇಮಿರಾಜ್‌ನಾಯ್ಕ ಮಾತನಾಡಿ, ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಭಗೀರಥ ಭವನ ಕಾಮಗಾರಿ ಪೂರ್ಣಗೊಳ್ಳಲು 60ಲಕ್ಷ ರೂ.ಗಳ ಅನುದಾನ ನೀಡಲಾಗುವುದು. ಸಮಾಜದ ಯುವಕರು ಶ್ರಮಜೀವಿಗಳು, ದುಶ್ಚಟಗಳಿಗೆ ಬಲಿಯಾಗದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಮಾತನಾಡಿ, ತಾಲೂಕಿನಲ್ಲಿ ಸಮಾಜದ ಮುಖಂಡರು ಸಂಘಟಿತರಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ಪ್ರತಿಭಾ ಪುರಸ್ಕಾರದಂತ ಕಾರ್ಯಕ್ರಮ ಆಯೋಜಿಸುವುದರಿಂದ ವಿದ್ಯಾರ್ಥಿಗಳಿಗೆ ಉತ್ಸಾಹ ದೊರೆಯಲಿದೆ. ಸಮಾಜದ ಮಕ್ಕಳನ್ನು ಉತ್ತಮ ಸಂಸ್ಕಾರವಂತರನ್ನಾಗಿ ಮಾಡಿ ಎಂದು ಕರೆ ನೀಡಿದರು.
ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರ್ಮಣ್ಣ ಮಾತನಾಡಿ, ಸರ್ಕಾರದಿಂದ ಸಿಗುವ ಸೌಲಭ್ಯ ಹಾಗೂ ನಿಗಮದಿಂದ ದೊರೆಯುವ ಶೈಕ್ಷಣಿಕ ಸೌಲಭ್ಯ ಪಡೆದು ಉನ್ನತ ಶಿಕ್ಷಣ ಪಡೆಯಬೇಕು ಎಂದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುನಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ 30 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶ್ರೀ ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ತೋಂಟದಾರ್ಯ ಮಠದ ಬಾಚಿಗೊಂಡನಹಳ್ಳಿ ಶಾಖಾಮಠದ ಶಿವಮಾಂತ ಸ್ವಾಮೀಜಿ ಮಾತನಾಡಿದರು.
ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಮೃತ್ಯುಂಜಯ ಬಾದಾಮಿ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಬಿ.ಕನಕಪ್ಪ, ಉಪಾಧ್ಯಕ್ಷ ರಾಮಣ್ಣ, ಪ್ರಧಾನ ಕಾರ್ಯದರ್ಶಿ ವೆಂಕಟೇಶ, ಗೌರವಾಧ್ಯಕ್ಷ ಗುಂಡ್ರ ಹನುಮಂತಪ್ಪ, ರಾಜಣ್ಣ, ಬಂಡಿಹಳ್ಳಿ ಬಸವರಾಜ, ಆಂಜಿನಪ್ಪ, ಅಂಕಸಮುದ್ರ ವೆಂಕಟೇಶ್, ಶಂಕ್ರಪ್ಪ, ಬಿ.ಎಸ್.ಬಸವರಾಜ, ಸಾಹುಕಾರ ಕೊಟ್ರೇಶ, ಉಪ್ಪಾರಗಟ್ಟಿ ವಿಜಯಕುಮಾರ್, ಅಯ್ಯಪ್ಪಸ್ವಾಮಿ, ಪರಶುರಾಮ ಇತರರಿದ್ದರು.