ಬಳ್ಳಾರಿಯಲ್ಲಿ ಆಯೋಜಿಸಿದ್ದ ವಿಶ್ವ ಸ್ಟ್ರೋಕ್ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಸರ್ಜನ್ ಡಾ.ಎನ್.ಬಸರೆಡ್ಡಿ ಉದ್ಘಾಟಿಸಿದರು. ಮಹಾನಗರ ಪಾಲಿಕೆ ಸದಸ್ಯ ಉಮಾದೇವಿ, ರಾಜ್ಯ ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ಜೆ.ಶ್ರೀನಿವಾಸ, ವೈದ್ಯಾಧಿಕಾರಿ ಸೌಜನ್ಯ, ಖುರ್ಶಿದ ಬೇಗಂ, ಸಣ್ಣಕೇಶವ ಇದ್ದರು. 
ಬಳ್ಳಾರಿ

ಆರು ತಿಂಗಳಿಗೊಮ್ಮೆ ತಪಾಸಣೆಗೊಳಗಾಗಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಆಮ್ಲಜನಕ ಕೊರತೆ
  • ವಿಶ್ವ ಸ್ಟ್ರೋಕ್ ದಿನಾಚರಣೆ ಕಾರ್ಯಕ್ರಮ
  • ಆಮ್ಲಜನಕ ಕೊರತೆಯಿಂದ ಪಾರ್ಶ್ವವಾಯು
ಬಳ್ಳಾರಿ: ಯುವಕರು ಮದ್ಯ ಮತ್ತು ಧೂಮಪಾನದಿಂದ ದೂರವಿದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಸರ್ಜನ್ ಡಾ.ಎನ್.ಬಸರೆಡ್ಡಿ ಹೇಳಿದರು.
ನಗರದ ಏಳನೇ ವಾರ್ಡ್‌ನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ, ಮೆದುಳಿನ ಆರೋಗ್ಯ ಚಿಕಿತ್ಸಾ ಕೇಂದ್ರ, ಜಿಲ್ಲಾಸ್ಪತ್ರೆ, ಮರಿಸ್ವಾಮಿ ಮಠ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸದ್ದ ವಿಶ್ವ ಸ್ಟ್ರೋಕ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

ಆಮ್ಲಜನಕ ಕೊರತೆ

ಪಾರ್ಶ್ವವಾಯು ಅಥವಾ ಮಿದುಳಿನ ಆಘಾತ ಮಿದುಳಿಗೆ ಕಡಿಮೆ ಆಮ್ಲಜನಕ ಕೊರತೆಯಿಂದ ಉಂಟಾಗುವ ಸ್ಥಿತಿಯಾಗಿದೆ. ಆದ್ದರಿಂದ, 30 ವರ್ಷ ಮೇಲ್ಪಟ್ಟ ಯುವಕರು ಆರು ತಿಂಗಳಿಗೊಮ್ಮ ಆರೋಗ್ಯ ತಪಾಸಣೆಗೆ ಒಳಪಡಬೇಕು. ಪಾರ್ಶ್ವವಾಯು ಸಂಭವಿಸಿದ ಮೊದಲ ನಾಲ್ಕು ಗಂಟೆಗಳಲ್ಲಿ ರೋಗಿಗೆ ವೈದ್ಯಕೀಯ ನೆರವು ನೀಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಯೋಗ-ವ್ಯಾಯಾಮ

ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್ ಮಾತನಾಡಿ, ಜೀವನ ಶೈಲಿಯ ಬದಲಾವಣೆಯಿಂದ ಆರೋಗ್ಯದಲ್ಲಿ ಏರು-ಪೇರು ಉಂಟಾಗುವ ಸಾಧ್ಯತೆಯಿದೆ.
ನಿಯಮಿತ ಆಹಾರ ಸೇವನೆ, ಯೋಗ-ವ್ಯಾಯಾಮ, ಸಂಗೀತ ಕೇಳುವುದು ಸೇರಿದಂತೆ ಇತರ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಶಿಸ್ತಿನ ಜೀವನ ನಡೆಸಿ ಸುಸ್ಥಿರ ಆರೋಗ್ಯ ಹೊಂದಬೇಕು ಎಂದರು. ಬಳಿಕ ಕರ್ನಾಟಕ ಮಿದುಳಿನ ಆರೋಗ್ಯ ಉಪಕ್ರಮ ಕುರಿತ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.