ಬಳ್ಳಾರಿಯ ಗಡಗಿ ಚನ್ನಪ್ಪ ವೃತ್ತದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಒಲೆಯಿಂದ ಟೀ ಮಾಡುವ ಮೂಲಕ ಕೇಂದ್ರ ಸರ್ಕಾರ ವಿರುದ್ಧ ವಿನೂತನವಾಗಿ ಪ್ರತಿಭಟಿಸಿದರು. ಜಿಲ್ಲಾಧಕ್ಷ ಅಲ್ಲಂ ಪ್ರಶಾಂತ್, ಮೇಯರ್ ಪಿ.ಗಾದೆಪ್ಪ, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ, ಮುಖಂಡರಾದ ಬೋಯಪಾಟಿ ವಿಷ್ಣು, ಮಂಜುಳಾ, ಧರ್ಮ, ಹನುಮಂತು ಇತರರಿದ್ದರು. 
ಬಳ್ಳಾರಿ

ಅನಿಲ ಬೆಲೆ ಏರಿಕೆ ಖಂಡನೀಯ

ಪ್ರಮುಖ ಮುಖ್ಯಾಂಶಗಳು

  • ಖಂಡನೀಯ
ಬಳ್ಳಾರಿ : ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಭೀತಿಯ ಹಿನ್ನೆಲೆ ವಾಣಿಜ್ಯ ಸಿಲಿಂಡರ್ ಅಭಾವ ಸೃಷ್ಟಿಯಾಗಿರುವ ಬೆನ್ನಲ್ಲೇ, ಅನಿಲ ಬೆಲೆ ಏರಿಕೆಯನ್ನು ಖಂಡಿಸಿ ಇಲ್ಲಿನ ಗಡಗಿ ಚನ್ನಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ ಮಾತನಾಡಿ, ಕೇಂದ್ರ ಸರ್ಕಾರದ ತಪ್ಪು ವಿದೇಶಾಂಗ ನೀತಿಯಿಂದಾಗಿ ದೇಶದಲ್ಲಿ ವಾಣಿಜ್ಯ ಅನಿಲದ ಕೊರತೆ ಉಂಟಾಗಿದೆ. ಅಂತರಾಷ್ಟ್ರೀಯ ಮಟ್ಟದ ಬಿಕ್ಕಟ್ಟುಗಳನ್ನು ನಿಭಾಯಿಸುವಲ್ಲಿ ಕೇಂದ್ರ ವಿಫಲವಾಗಿದ್ದು, ಇದರ ನೇರ ಹೊರೆ ಸಾಮಾನ್ಯ ಜನರ ಮೇಲೆ ಬೀಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಳಿಕ ಸಿಲಿಂಡರ್ ಬೆಲೆ ಏರಿಕೆಯ ಖಂಡಿಸಿ, ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ರಸ್ತೆಯಲ್ಲೇ ಒಲೆ ಹಚ್ಚಿ, ಅದರಲ್ಲಿ ಟೀ ತಯಾರಿಸಿ ಸಾರ್ವಜನಿಕರಿಗೆ ಹಂಚುವ ಮೂಲಕ ಗಮನ ಸೆಳೆದರು. ಅಡುಗೆ ಅನಿಲದ ಬಳಕೆಯನ್ನು ಕೈಬಿಟ್ಟು ಕಟ್ಟಿಗೆ ಒಲೆ ಆಶ್ರಯಿಸುವ ಅನಿವಾರ್ಯತೆ ಬಂದಿದೆ ಎಂದು ಆಕ್ರೋಶ ಹೊರಹಾಕಿದರು. ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
===