- ಸರ್ಕಾರದ ಕೋಟ್ಯಂತರ ರೂ. ಹಣ ದುರುಪಯೋಗ
- ನಿಯಮಬಾಹಿರವಾಗಿ ಸುಮಾರು 110 ಎಕರೆ ಜಮೀನು ಖರೀದಿ
ಬಳ್ಳಾರಿ : ಜಿಲ್ಲೆಯ ಸಿರಗುಪ್ಪ ತಾಲೂಕಿನಲ್ಲಿ ಎಸ್‌ಸಿ, ಎಸ್ಟಿ ಸಮುದಾಯದ ಆರ್ಥಿಕ ಸಬಲೀಕರಣಕ್ಕಾಗಿ ಹಮ್ಮಿಕೊಂಡಿರುವ ಭೂ ಒಡೆತನ ಯೋಜನೆಯ ಅನುಷ್ಠಾನದಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ನಡೆದಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವಿ.ಎಸ್.ಶಿವಶಂಕರ ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಶಾಮೀಲಾಗಿ ಸರ್ಕಾರದ ಕೋಟ್ಯಂತರ ರೂ. ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿದರು. ಯೋಜನೆಯ ನಿಯಮಾವಳಿಗಳ ಪ್ರಕಾರ ಜಿಲ್ಲಾಧಿಕಾರಿ ಪೂರ್ವ ಪರವಾನಗಿ ಇಲ್ಲದೆ ಮಧ್ಯವರ್ತಿಗಳು ಭೂಮಾಲೀಕರಿಂದ ಅರ್ಜಿಗಳನ್ನು ಪಡೆದುಕೊಂಡಿದ್ದಾರೆ.
ಜಿಲ್ಲಾ ವ್ಯಾಪ್ತಿಯ ಐದು ತಾಲೂಕುಗಳ ಪೈಕಿ ಕೇವಲ ಸಿರಗುಪ್ಪ ತಾಲೂಕಿನಲ್ಲಿಯೇ ಕಳೆದ 2025ರ ಜನವರಿ-ಫೆಬ್ರವರಿ ತಿಂಗಳಲ್ಲಿ ನಿಯಮಬಾಹಿರವಾಗಿ ಸುಮಾರು 110 ಎಕರೆ ಜಮೀನು ಖರೀದಿ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಕೇವಲ ಏಳ ರಿಂದ ಎಂಟು ಲಕ್ಷ ರೂ. ಬೆಲೆಬಾಳುವ ಜಮೀನುಗಳಿಗೆ ಕಣ್ಣುಮುಚ್ಚಿ ಬರೋಬ್ಬರಿ 19 ರಿಂದ 20 ಲಕ್ಷ ರೂ. ನಿಗದಿಪಡಿಸಿ, ಯಾವುದೇ ಸಮಿತಿ ಇಲ್ಲದೆ ಅಕ್ರಮವಾಗಿ ಹಂಚಿಕೆ ಮಾಡಿ ಭ್ರಷ್ಟಾಚಾರ ಎಸಗಲಾಗಿದೆ ಎಂದು ವಿವರಿಸಿದರು.
ಭೂಮಾಲೀಕರು ಸಮಾಜ ಕಲ್ಯಾಣ ಇಲಾಖೆಗಾಗಲಿ ಅಥವಾ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕಾಗಲಿ ಯಾವುದೇ ಭೂ ಮಾರಾಟದ ಅರ್ಜಿಗಳನ್ನು ನೀಡಿಲ್ಲ. ಸಿರಿಗೇರಿ ಮತ್ತು ಮೈಲಾಪುರ ಗ್ರಾಮಗಳ ಕೆಲವು ರೈತರ ಹೆಸರಿನಲ್ಲಿ ಮಧ್ಯವರ್ತಿಗಳೇ ನಕಲಿ ಸಹಿ ಮಾಡಿ, ಅನಧಿಕೃತವಾಗಿ ಅರ್ಜಿಗಳನ್ನು ಸೃಷ್ಟಿಸಿದ್ದಾರೆ. ಬ್ರೋಕರ್‌ಗಳಾದ ಮಹಂತೇಶ ರಾಯಚೂರು, ಶಿವಕುಮಾರ್ ಮತ್ತು ರಾಮನಗೌಡ ರಾಯಚೂರು ಎಂಬುವವರು ಸಮಾಜ ಕಲ್ಯಾಣ ಇಲಾಖೆಯ ಮಾಜಿ ಉಪನಿರ್ದೇಶಕ ಮಲ್ಲಿಕಾರ್ಜುನ ಅವರೊಂದಿಗೆ ಕೈಜೋಡಿಸಿ ದಲಿತರ ಹೆಸರಿನಲ್ಲಿ ಈ ವಂಚನೆ ಜಾಲ ರೂಪಿಸಿದ್ದಾರೆ ಎಂದು ಆರೋಪಿಸಿದರು. ಇದರ ಈ ಬಗ್ಗೆ ಈಗಾಗಲೇ ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ ಎಂದರು.
ಜಿಲ್ಲಾಡಳಿತ ಹಾಗೂ ಸರ್ಕಾರ ಈ ಕೂಡಲೇ ಎಚ್ಚೆತ್ತು ಸಮಗ್ರ ತನಿಖೆ ನಡೆಸದಿದ್ದರೆ, ಮುಂಬರುವ ದಿನಗಳಲ್ಲಿ ಜಿಲ್ಲಾದ್ಯಂತ ದೀನ ದಲಿತ ಮತ್ತು ರೈತ ಹೋರಾಟಗಾರರನ್ನು ಒಗ್ಗೂಡಿಸಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಪದಾಧಿಕಾರಿಗಳಾದ ಎಂ.ದುರ್ಗಪ್ಪ, ಎಚ್. ಗಾಳೆಪ್ಪ ಇದ್ದರು.