- ಬೇನಾಮಿ ರೂಪದಲ್ಲಿ ಭಾಗಿ
- ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯ
ಬಳ್ಳಾರಿ : ವಲಯ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಅನೈತಿಕ ಚಟುವಟಿಕೆಗಳು ನಿಯಂತ್ರಿಸಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರೌಡಿ ನಿಗ್ರಹ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಬಳ್ಳಾರಿ ವಲಯದ ಐಜಿಪಿ ಡಾ.ಹರ್ಷ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಲಯದ ನಾಲ್ಕು ಜಿಲ್ಲೆಗಳಾದ ಬಳ್ಳಾರಿ 104, ರಾಯಚೂರು 103, ಕೊಪ್ಪಳ 68, ವಿಜಯನಗರ 106 ಸೇರಿ 381 ರೌಡಿ ಶೀಟರ್‌ಗಳ ಮನೆಗಳ ಮೇಲೆ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ ಅಗತ್ಯ ಮಾಹಿತಿ ಕಲೆ ಹಾಕಲಾಗಿದೆ. ಕಾನೂನು ಸುವ್ಯವಸ್ಥಿಗಾಗಿ ವಲಯದ ನಾಲ್ಕು ಜಿಲ್ಲೆಗಳಲ್ಲಿ 22 ರೌಡಿ ನಿಗ್ರಹ ದಳ ರಚಿಸಲಾಗಿದೆ ಎಂದರು.
ಬಳ್ಳಾರಿ 664, ವಿಜಯನಗರ 633, ರಾಯಚೂರು 1,560 ಹಾಗೂ ಕೊಪ್ಪಳ 954 ಸೇರಿ ಒಟ್ಟು 3,811 ರೌಡಿ ಶೀಟರ್‌ಗಳಿದ್ದಾರೆ. ಇದರಲ್ಲಿ 53 ಪ್ರಕರಣಗಳಲ್ಲಿ ಹತ್ತು ಮಂದಿ ರೌಡಿ ಶೀಟರ್‌ಗಳನ್ನು ಗಡಿಪಾರು ಮಾಡಲಾಗಿದೆ ಎಂದರು.
ಅಕ್ರಮ ಮರಳು ಸಾಗಣೆ, ಮಟ್ಕಾ, ಜೂಜಾಟ, ಇಸ್ಪೀಟ್ ಹಾಗೂ ಇತರೆ ಅಕ್ರಮ ಚಟುವಟಿಕೆಗಳಲ್ಲಿ ನೇರವಾಗಿ ಅಥವಾ ಬೇನಾಮಿ ರೂಪದಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ರೌಡಿ ಶೀಟರ್‌ಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಪೊಲೀಸ್ ಇಲಾಖೆಯ ಉದ್ದೇಶವಾಗಿದೆ. ಆದರೆ ಅಪರಾಧ ಚಟುವಟಿಕೆ ಮುಂದುವರಿಸಿದರೆ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯ ಎಂದರು.
ಜಿಲ್ಲೆಯ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಅಂದ್ರಾಳ್ ನಿವಾಸಿ ರೌಡಿ ಶೀಟರ್ ಸೀತರಾಮ್ ಮನೆಯಲ್ಲಿ ಏರ್‌ಗನ್ ಹಾಗೂ ಸಹಿ ಮಾಡಲಾದ ಸ್ಟಾಂಪ್ ಪೇಪರ್‌ಗಳು ಪತ್ತೆಯಾಗಿದ್ದು, ಏರ್ ಗನ್‌ನನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದರು. ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್, ಎಎಸ್ಪಿ ನವೀನ್ ಕುಮಾರ್, ಡಿವೈಎಸ್ಪಿ ಗೋವಿಂದರಾಜುಲು ಇದ್ದರು.