ಬಳ್ಳಾರಿಯ ಬೆಂಗಳೂರು ರಸ್ತೆಯಲ್ಲಿ ಒತ್ತುವರಿಯಾಗಿದ್ದ ಪುಟ್‌ಪಾತ್ ತೆರವು ಕಾರ್ಯಾಚರಣೆ ನಡೆಯಿತು. ಪಾಲಿಕೆ ಇಂಜನಿಯರ್ ಮುನಾಫ್ ಪಟೇಲ್ ಇದ್ದರು. 
ಬಳ್ಳಾರಿ

ನಗರದಲ್ಲಿ ಪುಟ್‌ಪಾತ್ ತೆರವು

ಪ್ರಮುಖ ಮುಖ್ಯಾಂಶಗಳು

  • ಒತ್ತುವರಿ ತೆರವು ಕಾರ್ಯಾಚರಣೆ

ಬಳ್ಳಾರಿ :

ಇಲ್ಲಿನ ಬೆಂಗಳೂರು ರಸ್ತೆಯಲ್ಲಿ ಮಹಾನಗರ ಪಾಲಿಕೆಯಿಂದ ಒತ್ತುವರಿಯಾಗಿದ್ದ ಪುಟ್‌ಪಾತ್ ತೆರವು ಕಾರ್ಯಾಚರಣೆ ಬುಧವಾರ ನಡೆಯಿತು.

ಫುಟ್‌ಪಾತ್ ಆಕ್ರಮಿಸಿ ಹಾಕಿಕೊಂಡಿದ್ದ ತಾತ್ಕಾಲಿಕ ಅಂಗಡಿಗಳು, ಶೆಡ್‌ಗಳ ಛಾವಣಿ, ನಿಯಮಬಾಹಿರವಾಗಿ ಅಳವಡಿಸಲಾಗಿದ್ದ ಜಾಹೀರಾತು ಹಾಗೂ ವಾಣಿಜ್ಯ ನಾಮ ಫಲಕಗಳು, ಫುಟ್‌ಪಾತ್ ಮೇಲೆ ಅಡ್ಡಲಾಗಿ ಇಡಲಾಗಿದ್ದ ಮಾರಾಟದ ವಸ್ತುಗಳನ್ನು ಅಧಿಕಾರಿಗಳು ತೆರವುಗೊಳಿಸಿದರು.

ಮಹಾನಗರ ಪಾಲಿಕೆ ಪರಿಸರ ಇಂಜನಿಯರ್ ಮುನಾಫ್ ಪಟೇಲ್ ಮಾತನಾಡಿ, ಸುಪ್ರೀಂ ಕೋರ್ಟ್ ನೀಡಿರುವ ಸ್ಪಷ್ಟ ನಿರ್ದೇಶನದನ್ವಯ ನಗರದ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್‌ಗಳನ್ನು ಮುಕ್ತಗೊಳಿಸಲಾಗುತ್ತಿದೆ. ಕಾರ್ಯಾಚರಣೆಗೂ ಮುನ್ನವೇ ವ್ಯಾಪಾರಿಗಳಿಗೆ ಪಾಲಿಕೆಯಿಂದ ಸೂಕ್ತ ತಿಳುವಳಿಕೆ ಹಾಗೂ ಎಚ್ಚರಿಕೆ ಪತ್ರ ನೀಡಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಪಾಲಿಕೆಯ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಹಾಗೂ ಪಾದಚಾರಿಗಳ ರಕ್ಷಣೆಗೆ ಪ್ರತಿ ಬುಧವಾರ ಮತ್ತು ಗುರುವಾರ ನಿರಂತರವಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಪಾಲಿಕೆ ನಿರ್ಧರಿಸಿದೆ. ಮುಂಬರುವ ದಿನಗಳಲ್ಲಿ ಜನನಿಬಿಡ ರಸ್ತೆಗಳಲ್ಲೂ ವೇಳಾಪಟ್ಟಿ ಪ್ರಕಾರ ಈ ತೆರವು ಕಾರ್ಯ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು.
ಸದ್ಯಕ್ಕೆ ಒತ್ತುವರಿ ಮಾಡಿದವರಿಂದ ಯಾವುದೇ ದಂಡ ವಸೂಲಿ ಮಾಡಿಲ್ಲ. ಫುಟ್‌ಪಾತ್ ಸಂಪೂರ್ಣವಾಗಿ ಪಾದಚಾರಿಗಳಿಗೆ ಮೀಸಲಾಗಿದ್ದು, ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಒತ್ತುವರಿ ತೆರವುಗೊಳಿಸಿ ಸಹಕರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.