ಕಂಪ್ಲಿಯ ತಹಸಿಲ್ ಕಚೇರಿ ಸಭಾಂಗಣದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಜೂಗಲ ಮಂಜು ನಾಯಕ. ಪ್ರಮುಖರಾದ ಶಾಂತಿಲಾಲ್ ಬಾಲಾರ್, ಫತೇಕುಮಾರ್ ಭಾಫ್ಣ, ರಾಕೇಶ್ ಬಾಗ್ರೇಚಾ, ಮಾಲತೇಶ ದೇಶಪಾಂಡೆ ಇತರರಿದ್ದರು.
ಕಂಪ್ಲಿ: ಭಗವಾನ್ ಮಹಾವೀರ ಅವರ ಪಂಚ ಮಹಾವ್ರತಗಳನ್ನು ಸರ್ವರೂ ಅಳವಡಿಸಿಕೊಂಡರೆ ಶಾಂತಿಯುತ ಸಮಾಜ ನಿರ್ಮಿಸಲು ಸಾಧ್ಯ ಎಂದು ಜೈನ ಸಮಾಜದ ಉಪಾಧ್ಯಕ್ಷ ಶಾಂತಿಲಾಲ್ ಬಾಲಾರ್ ಹೇಳಿದರು.
ನಗರದ ತಹಸಿಲ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾವೀರರು ಸತ್ಯ, ಅಹಿಂಸೆ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಎನ್ನುವ ಐದು ತತ್ವಗಳನ್ನು ಬೋಧಿಸಿದ್ದಾರೆ. ಬಾಳು ಮತ್ತು ಇತರರನ್ನು ಬಾಳಲು ಬಿಡು ಎನ್ನುವ ಸರಳ ಆದರ್ಶವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು. ತಹಸೀಲ್ದಾರ್ ಜೂಗಲ ಮಂಜುನಾಯಕ ಮಾತನಾಡಿ, ಎಲ್ಲ ಜೀವಿಗಳನ್ನು ಸಮನಾಗಿ ಕಾಣಬೇಕು. ಜತೆಗೆ ಹಿಂಸೆ ನೀಡಬಾರದು. ಜೈನ ಧರ್ಮದ ತತ್ವ ಪಾಲನೆಯಿಂದ ಸರಳ ಜೀವನ ಸಾಗಿಸಲು ಸಾಧ್ಯ ಎಂದು ತಿಳಿಸಿದರು.
ತಾಲೂಕು ಕಚೇರಿ ಸಿಬ್ಬಂದಿ ಮಾಲತೇಶ ದೇಶಪಾಂಡೆ, ಜೈನ ಸಮಾಜದ ಖಜಾಂಚಿ ಫತೇಕುಮಾರ್ ಭಾಫ್ಣ, ಪ್ರಮುಖರಾದ ಚೇತನ್‌ಕುಮಾರ್ ಹುಂಡಿಯಾ, ರಾಕೇಶ್ ಬಾಗ್ರೇಚಾ, ಹೀರಾಚಂದ್ ಬಾಗ್ರೇಚಾ, ನವೀನ್ ಬಾಗ್ರೇಚಾ, ದಿನೇಶ್ ದಾಂತೇವಾಡಿಯಾ ಇತರರಿದ್ದರು.