ಕುರುಗೋಡು ತಾಲೂಕಿನ ಎಚ್.ವೀರಾಪುರ ಗ್ರಾಮದ ಕೆರೆಯನ್ನು ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪಿಡಿಒ ದೇವರಾಜ್‌ರನ್ನು ತರಾಟೆಗೆ ತೆಗೆದುಕೊಂಡರು. 
ಬಳ್ಳಾರಿ

ಕೆರೆಯಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸಿ

ಕುರುಗೋಡು: ಕೆರೆಯಲ್ಲಿ ಅಗತ್ಯ ಪ್ರಮಾಣದ ನೀರು ಸಂಗ್ರಹಿಸದ ಹಿನ್ನೆಲೆಯಲ್ಲಿ ಎಚ್.ವೀರಾಪುರ ಗ್ರಾಪಂಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.
ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಬವಣೆ ನೀಗಿಸಲು ಕಳೆದ 10 ದಿನಗಳಿಂದ ಎಲ್‌ಎಲ್‌ಸಿ ಕಾಲುವೆಯಲ್ಲಿ ನೀರು ಹರಿಸಲಾಗುತ್ತಿದೆ. ಕಾಲುವೆಯಿಂದ ಗ್ರಾಮದ ಕೆರೆಗೆ ಪೈಪ್‌ಲೈನ್ ಮೂಲಕ ನೀರು ತುಂಬಿಸಲಾಗುತ್ತಿದೆ. ಕೆರೆಯ ಒಟ್ಟು ಸಂಗ್ರಹ ಸಾಮರ್ಥ್ಯ 14 ಅಡಿ ಇದ್ದು, ಈವರೆಗೂ ಕೇವಲ ಏಳು ಅಡಿ ನೀರು ಸಂಗ್ರಹವಾಗಿದೆ. ಇನ್ನೆರಡು ದಿನದಲ್ಲಿ ಕಾಲುವೆಯಲ್ಲಿ ನೀರು ಬಂದ್ ಆಗಲಿವೆ. ಈಗಿರುವ ನೀರು ಗ್ರಾಮಕ್ಕೆ ಸಾಕಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿನೇ ದಿನೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ಜನ, ಜಾನುವಾರುಗೆ ನೀರಿನ ಅಭಾವ ಉಂಟಾಗಲಿದೆ. ಸಮಸ್ಯೆ ಗಂಭೀರ ಇದ್ದು, ಇನ್ನೊಂದು ಮೋಟರ್ ಪಡೆದು ಕರೆ ತುಂಬಿಸಲು ಮುಂದಾಗಬೇಕು. ಶುದ್ಧ ಕುಡಿಯುವ ನೀರಿನ ಘಟಕದ ನೀರು ಕುಡಿದರೆ ಮೈ-ಕೈ ನೋವು ಬರುತ್ತಿದ್ದು, ಕೆರೆಯಲ್ಲಿ ನೀರನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸಬೇಕೆಂದು ಪಿಡಿಒಗೆ ದೇವರಾಜ್‌ಗೆ ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ದೇವರಾಜ್, ಹೊಸ ಪೈಪ್‌ಲೈನ್ ಕಾಮಗಾರಿ ಪೂರ್ಣವಾಗಿಲ್ಲ. ಹೀಗಾಗಿ ಹಳೇ ಪೈಪ್‌ಲೈನ್ ಮೂಲಕ ಕೆರೆಗೆ ಕಾಲುವೆ ಮೂಲಕ ನೀರು ಹರಿಸಲಾಗುತ್ತಿದೆ. ಕೆರೆ ಸಂಪೂರ್ಣ ತುಂಬಿಸಲು ಕನಿಷ್ಠ ಒಂದು ತಿಂಗಳು ಬೇಕು. ಒಮ್ಮೆಲೆ ನೀರು ತುಂಬಿಸುವುದು ಅಸಾಧ್ಯವಾಗಿದ್ದು, ಗ್ರಾಮಸ್ಥರು ಅರ್ಥ ಮಾಡಿಕೊಳ್ಳಬೇಕು. ಸಾಧ್ಯವಾದಷ್ಟು ನೀರು ಸಂಗ್ರಹಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಇದರಿಂದ ಕೋಪಗೊಂಡ ಗ್ರಾಮಸ್ಥರು ಅಧಿಕಾರಿಗಳೊಂದಿಗೆ ಕೆಲವೊತ್ತು ವಾದ ನಡೆಸಿ ಹೊರನಡೆದರು.